ಮಳಲಿ ದೇವರಗುಡ್ಡೆ ಶ್ರೀ ಸೂರ್ಯನಾರಾಯಣ ದೇವಾಲಯದಲ್ಲಿ ಡಿಸೆಂಬರ್ 7ರಂದು ಗರ್ಭಗುಡಿಯ ಷಡಾಧಾರ ಪ್ರತಿಷ್ಠೆ

ಮಂಗಳೂರು: ಗಂಜಿಮಠದ ಮೊಗರು ಗ್ರಾಮದ ಶ್ರೀ ಕ್ಷೇತ್ರ ದೇವರಗುಡ್ಡೆಯ ಶ್ರೀ ಸೂರ್ಯನಾರಾಯಣ ದೇವಾಲಯದಲ್ಲಿ ನೂತನ ಗರ್ಭಗುಡಿಯ ಗರ್ಭಗುಡಿ ನಿರ್ಮಾಣ ಅಂಗವಾಗಿ ಷಡಾಧಾರ ಪ್ರತಿಷ್ಠೆಯ ಮಹೋತ್ಸವ ಡಿಸೆಂಬರ್ 7ರಂದು ಧನುರ್ಲಗ್ನದ ಶುಭ ಮುಹೂರ್ತದಲ್ಲಿ ಜರಗಲಿದೆ. ಶ್ರೀ ವಿಶ್ವಾವಸು ನಾಮ ಸಂವತ್ಸರ, ಮಾರ್ಗಶಿರ ಬಹುಳ 3ರಂದು ದಿವಾ 8.06ಕ್ಕೆ ಒದಗುವ ಶುಭಲಗ್ನದಲ್ಲಿ ಈ ಪ್ರತಿಷ್ಠೆ ಕಾರ್ಯಕ್ರಮವನ್ನು ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ನೆರವೇರಿಸಲಿದ್ದೇವೆ ಎಂದು ದೇವಾಲಯ ಜೀರ್ಣೋದ್ದಾರ ಸಮಿತಿ ಮತ್ತು ಟ್ರಸ್ಟ್‌ ಪ್ರಕಟಿಸಿದೆ.

 

ಆಧ್ಯಾತ್ಮಿಕ ಮಹೋತ್ಸವದ ಅಂಗವಾಗಿ ಡಿಸೆಂಬರ್ 6ರಂದು ಸಂಜೆ 5.30ರಿಂದ ಪ್ರಾರ್ಥನೆ, ಪುಣ್ಯಾಹ, ವಾಸ್ತುಪೂಜೆ ಮತ್ತು ಷಡಾಧಾರಾದಿಗಳ ಅಧಿವಾಸ ನಡೆಯಲಿದೆ. ಡಿಸೆಂಬರ್ 7ರಂದು ಬೆಳಿಗ್ಗೆ 6.30ಕ್ಕೆ ಪುಣ್ಯಾಹದೊಂದಿಗೆ ಕಾರ್ಯಕ್ರಮ ಆರಂಭವಾಗಿ, 7.30ರಿಂದ ಭಜನೆ ನಡೆಯಲಿದ್ದು, ದಿವಾ 8.06ಕ್ಕೆ ಧನುರ್ಲಗ್ನದಲ್ಲಿ ಆಧಾರ ಶಿಲಾ ಪ್ರತಿಷ್ಠೆ ನೆರವೇರುವುದಿದೆ. ಬೆಳಿಗ್ಗೆ 9.30ಕ್ಕೆ ಮಹಾಪೂಜೆ ಮತ್ತು ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ವ್ಯವಸ್ಥೆಯಿದೆ.

ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವ ಹೆಚ್ಚಿಸುವ ಉದ್ದೇಶದಿಂದ ಡಿಸೆಂಬರ್ 7 ಮತ್ತು 8ರಂದು ಸಂಜೆ 6.15ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಲಿಯಿಂದ ಯಕ್ಷಗಾನ ಬಯಲಾಟ ಪ್ರದರ್ಶನ ಜರುಗಲಿದೆ. ಈ ಸೇವೆಯನ್ನು ಅತಿಕಾರಿಬೆಟ್ಟು ನಿವಾಸಿಗಳಾದ ಕಲ್ಯಾಣಿ ಸಪಲಿಗ, ರಾಮಚಂದ್ರ ಸಪಲಿಗ ಹಾಗೂ ಕುಟುಂಬಸ್ಥರು ಭಕ್ತಿಯಿಂದ ವಹಿಸಿಕೊಂಡಿದ್ದಾರೆ.

ನಿಧಿ ಕುಂಭಕ್ಕೆ ಚಿನ್ನ-ಬೆಳ್ಳಿ ನಾಣ್ಯಗಳು ಲಭ್ಯ

ಭಕ್ತಾದಿಗಳಿಗೆ ನಿಧಿ ಕುಂಭಕ್ಕಾಗಿ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ದೇವಸ್ಥಾನದಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಚಿನ್ನದ ನಾಣ್ಯಗಳು ₹2000 ಮತ್ತು ₹3000 ದರದಲ್ಲಿ, ಬೆಳ್ಳಿಯ ನಾಣ್ಯಗಳು ₹500 ಮತ್ತು ₹1000 ದರದಲ್ಲಿ ಲಭ್ಯವಿರುತ್ತದೆ ಎಂದು ಸಮಿತಿ ತಿಳಿಸಿದೆ.

ಬೆಳಿಗ್ಗೆ 10 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ. ಪೊಳಲಿ ಹಾಗೂ ಮಲ್ತೆ ಕ್ಷೇತ್ರದ ಅರ್ಚಕರು ಮತ್ತು ಧಾರ್ಮಿಕ ಮುಖಂಡರು ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮಕ್ಕೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರು ಡಾ. ವೈ. ಭರತ್ ಶೆಟ್ಟಿ, ಉಳಿಪಾಡಿಗುತ್ತು ಶಾಸಕರು ರಾಜೇಶ್ ನಾಯಕ್, ಮಾಜಿ ಸಚಿವ ರಮಾನಾಥ ರೈ, ವಿವಿಧ ದೇವಾಲಯಗಳ ಆಡಳಿತ ಮೊಕ್ತಸರರು, ಸಮಾಜಮುಖಿ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸ್ಥಳೀಯ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಸಮಾರಂಭಕ್ಕೆ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶೇಖರ ಜೋಗಿ ಅಧ್ಯಕ್ಷತೆ ವಹಿಸಲಿದ್ದು, ಟ್ರಸ್ಟ್ ಅಧ್ಯಕ್ಷ ಭಾಸ್ಕರ್ ಕುಲಾಲ್ ಸೇರಿದಂತೆ ಸಮಿತಿ ಹಾಗೂ ಟ್ರಸ್ಟ್ ಸದಸ್ಯರು ಕಾರ್ಯಕ್ರಮದ ಎಲ್ಲಾ ಸಿದ್ಧತೆಯಲ್ಲಿ ನಿರತವಾಗಿದ್ದಾರೆ. ದೇವಾಲಯ ಜೀರ್ಣೋದ್ಧಾರ ಸಮಿತಿ ಮತ್ತು ಟ್ರಸ್ಟ್ ಭಕ್ತರನ್ನು ತನು–ಮನ–ಧನಗಳಿಂದ ಸಹಕರಿಸಿ, ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದೆ.

error: Content is protected !!