ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಮಾನವೀಯತೆಯ ವಿರುದ್ಧದ ಅಪರಾಧಗಳ ಅತ್ಯಂತ ವಿವಾದಾತ್ಮಕ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಲಾಗಿದ್ದು, ಬಾಂಗ್ಲಾದ ಮಾಜಿ ಪ್ರಧಾನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.

ಮಹತ್ವದ ಬೆಳವಣಿಗೆಯೊಂದರಲ್ಲಿ ಬಾಂಗ್ಲಾದೇಶದ ಪದಚ್ಯುತ ಪ್ರಧಾನಮಂತ್ರಿ ಶೇಖ್ ಹಸೀನಾ ಅವರನ್ನು ದೋಷಿ ಎಂದು ಢಾಕಾದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಘೋಷಿಸಿದೆ. ಕಳೆದ ವರ್ಷ ವಿದ್ಯಾರ್ಥಿಗಳ ನೇತೃತ್ವದಲ್ಲಿ ದೇಶವ್ಯಾಪಕವಾಗಿ ಭುಗಿಲೆದ್ದ ದಂಗೆಗಳ ಮೇಲಿನ ‘ಮಾರಕ ದಮನ’ಕ್ಕೆ ಹಸೀನಾ ನೇರ ಸೂಚನೆ ನೀಡಿದ್ದಾಗಿ ನ್ಯಾಯಾಲಯವು ಹೇಳಿದೆ.
ತಿಂಗಳುಗಳ ಕಾಲ ನಡೆದ ವಿಚಾರಣೆಯಲ್ಲಿ ಕಂಡುಕೊಂಡ ಸಾಕ್ಷ್ಯಗಳು, ಭದ್ರತಾ ಸಿಬ್ಬಂದಿಯ ಹೇಳಿಕೆಗಳು ಮತ್ತು ತನಿಖಾ ವರದಿಗಳ ಆಧಾರದಲ್ಲಿ ನ್ಯಾಯಾಲಯವು ಹಸೀನಾ ಅವರ ಪಾತ್ರವನ್ನು ಉಲ್ಲೇಖಿಸಿದೆ. ಪ್ರತಿಭಟನೆಗಳನ್ನು ಕುಂಠಿತಗೊಳಿಸುವ ಹೆಸರಿನಲ್ಲಿ ಭದ್ರತಾ ಪಡೆಗಳು ಅತಿಯಾದ ಬಲಪ್ರಯೋಗಕ್ಕೆ ಮುಂದಾಗಿದ್ದವು ಎಂಬ ವಿಚಾರವನ್ನು ನ್ಯಾಯಾಲಯ ವಿಶೇಷವಾಗಿ ಉಲ್ಲೇಖಿಸಿದೆ.
