ಮೊಯ್ದೀನ್‌ ಬಾವಾ ವಾಟ್ಸ್ಯಾಪ್‌ ಹ್ಯಾಕ್:‌ ಕಾಂಟಾಕ್ಟ್‌ ಲಿಸ್ಟ್‌ನಲ್ಲಿರುವವರಿಂದ ಹಣ ಕೇಳಿದ ಹ್ಯಾಕರ್ಸ್

ಮಂಗಳೂರು: ಮಾಜಿ ಶಾಸಕ ಮೊಯ್ದೀನ್‌ ಬಾವಾರ ಅವರ ವಾಟ್ಸ್ಯಾಪ್‌ ಅನ್ನು ಹ್ಯಾಕರ್ಸ್‌ ಹ್ಯಾಕ್‌ ಮಾಡಿ, ಹಲವಾರು ಮಂದಿಗೆ ಹಣಕ್ಕೆ ಲಕ್ಷಾಂತರ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಇಂದು ಮಧ್ಯಾಹ್ನದಿಂದ ಬಾವಾ ಅವರ ವಾಟ್ಸ್ಯಾಪ್‌ ಹ್ಯಾಕ್‌ ಮಾಡಿರುವ ಹ್ಯಾಕರ್ಸ್‌ ಅವರ ನಂಬರ್‌ನಿಂದಲೇ ಪತ್ರಕರ್ತರು, ಪೊಲೀಸರು, ಸೇರಿ ಅವರ ಕಾಂಟಾಕ್ಟ್‌ ಲಿಸ್ಟ್‌ನಲ್ಲಿರುವವರಿಗೆ ದುಡ್ಡು ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ.

ಬಾವಾ ಅವರ ವಾಟ್ಸ್ಯಾಪ್‌ ನಂಬರ್‌ನಿಂದ ‌ʻನಿಮ್ಮಿಂದ ನನಗೆ ಸಹಾಯ ಬೇಕುʼ ಎಂಬ ಮೆಸೇಜ್‌ ಬಂದಿದೆ. ಬಾವಾ ಏನೋ ಕಷ್ಟದಲ್ಲಿದ್ದಾರೆ ಎಂದು, ʻಏನಾಯ್ತು ಬಾವಾ?ʼ ಎಂದು ಕೇಳಿದಾಗ, ಇಂಗ್ಲೀಷ್‌ನಲ್ಲಿ ಕಂತೆ ಪುರಾಣಗಳನ್ನೆಲ್ಲಾ ಬಿಚ್ಚಿಟ್ಟು, ತನ್ನ ಮತ್ತೊಂದು ಯಪಿಐ ಐಡಿ ನೀಡಿ ಇದಕ್ಕೆ ಹಣ ಕಳಿಸುವುದು ಮಾತ್ರವಲ್ಲದೆ, ಅದರ ಸ್ಕ್ರೀನ್‌ ಶಾಟ್‌ ಕಳಿಸುವಂತೆಯೂ ಇಂಗ್ಲೀಷ್‌ನಲ್ಲಿ ಕೇಳಿದ್ದಾರೆ.

ಇದನ್ನು ನೋಡಿ ಅಚ್ಚರಿಗೊಂಡು ಮೆಸೇಜ್‌ ಸ್ವೀಕರಿಸಿದವರು ಬಾವಾರಿಗೆ ನೇರ ಕರೆ ಮಾಡಿದಾಗ, ʻನನ್ನ ನಂಬರ್‌ ಹ್ಯಾಕ್‌ ಆಗಿದೆʼ ಎಂದು ಬಾವಾ ದಿಗಿಲು ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಹಲವಾರು ಮಂದಿಗೆ ಬಾವಾ ವಾಟ್ಸ್ಯಾಪ್‌ ನಂಬರ್‌ನಿಂದ ಮೆಸೇಜ್‌ ಹೋಗಿದೆ ಎನ್ನಲಾಗಿದೆ. ಮೆಸೇಜ್‌ ಸ್ವೀಕರಿಸಿದವರೆಲ್ಲಾ ಬಾವಾಗೆ ಕರೆ ಮಾಡಿ ವಿಚಾರಿಸಿದ್ದು, ತನ್ನ ನಂಬರ್‌ ಹ್ಯಾಕ್‌ ಆಗಿದೆ ಎಂದು ತಿಳಿಸಿ, ತಿಳಿಸಿ ಸುಸ್ತಾಗಿದ್ದಾರೆ.

ತನ್ನ ನಂಬರ್‌ನಿಂದ ಹಣಕ್ಕೆ ಬೇಡಿಕೆ ಇಟ್ಟು ಮೆಸೇಜ್‌ ಮಾಡಿದರೆ ಸ್ಪಂದಿಸಬೇಡಿ. ತನ್ನ ನಂಬರನ್ನು ಹ್ಯಾಕ್‌ ಮಾಡಲಾಗಿದೆ. ಪೊಲೀಸರಿಗೆ ದೂರು ನೀಡಲು ಹೋಗುವುದಾಗಿ ಮೊಯ್ದೀನ್‌ ಬಾವಾ ʻವಾಯ್ಸ್‌ ಆಫ್‌ ಪಬ್ಲಿಕ್‌ʼಗೆ ತಿಳಿಸಿದ್ದಾರೆ.

error: Content is protected !!