ತುಮಕೂರು: ಗೋಪುರ ನಿರ್ಮಾಣದ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ, ಚಿಕ್ಕನಾಯಕನಹಳ್ಳಿಯ ಗೋಡೆಕೆರೆ ಸಿದ್ದರಾಮೇಶ್ವರ ಮಹಾಸಂಸ್ಥಾನ ಮಠದ ಮೃತ್ಯುಂಜಯ ಸ್ವಾಮೀಜಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಫೆ.11ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಿದ್ದರಾಮಯ್ಯ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಫೆಬ್ರವರಿ 11ರ ಬೆಳಿಗ್ಗೆ 5.30ರ ಸಮಯ ಎದುರಾದ ಸಿದ್ದರಾಮಯ್ಯ, ಸ್ವಾಮೀಜಿಯವರ ಬಳಿ “ನೀನು ದೇವಸ್ಥಾನದ ಗೋಪುರ ಕಟ್ಟಲು ಬಿಡುತ್ತಿಲ್ಲ, ನಿನ್ನನ್ನು ಕೊಲೆ ಮಾಡಲು ಬಂದಿದ್ದೇನೆ” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಮೇಲೆ ಎರಗಿದ್ದಾನೆ. ಸಾಲದು ಎಂಬಂತೆ ಪ್ಲಾಸ್ಟಿಕ್ ಕುರ್ಚಿಯಿಂದ ಹಲ್ಲೆ ನಡೆಸಿ, ಶ್ರೀಗಳನ್ನು ಎಳೆದುಕೊಂಡು ಹೋಗಿ ಗೇಟ್ ಹತ್ತಿರ ತಳ್ಳಿ, “ನಿನ್ನನ್ನು ಎಲ್ಲರೂ ನೋಡುವ ಹಾಗೆ ಸಾಯಿಸುತ್ತೇನೆ” ಎಂದು ಕುತ್ತಿಗೆ ಹಿಸುಕಿದ್ದಾನೆ!

ಬೆಚ್ಚಿಬಿದ್ದ ಮಠದ ಬಾಲಕನೊಬ್ಬ ಸ್ವಾಮೀಜಿಗಳ ರಕ್ಷಣೆಗೆ ಬಂದಾಗ, ಆರೋಪಿ ಆ ಪುಟ್ಟ ಬಾಲಕನನ್ನೂ ಬಲವಾಗಿ ತಳ್ಳಿ ವಿಕೃತಿ ಮೆರೆದಿದ್ದಾನೆ. ಬಾಲಕನ ಕಿರುಚಾಟ ಕೇಳಿ ಮಠದ ಸಿಬ್ಬಂದಿ ಓಡಿ ಬರದೇ ಇದ್ದಿದ್ದರೆ, ಅಂದು ಆ ಮಠದಲ್ಲಿ ದೊಡ್ಡ ಅನಾಹುತವೇ ನಡೆದು ಹೋಗುತ್ತಿತ್ತು. ಸಿಬ್ಬಂದಿಕೂಡಲೇ ಧಾವಿಸಿ ಸ್ವಾಮೀಜಿಯನ್ನು ಸಿದ್ದರಾಮಯ್ಯನ ಕೈಯಿಂದ ಬಿಡಿಸಿದ್ದಾರೆ.
ಸಿದ್ದರಾಮಯ್ಯನ ದಾಳಿಯಲ್ಲಿ ಸ್ವಾಮೀಜಿಗಳ ಮುಖ ಮತ್ತು ಕುತ್ತಿಗೆಗೆ ಗಾಯಗಳಾಗಿದ್ದು, ಅವರನ್ನು ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದರೂ, ಪೊಲೀಸರು ಮಾತ್ರ ಸುಮ್ಮನೆ ಕೂರಲಿಲ್ಲ. ಸ್ವಾಮೀಜಿ ನೀಡಿದ ದೂರಿನ ಮೇರೆಗೆ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡ ಚಿಕ್ಕನಾಯಕನಹಳ್ಳಿ ಪೊಲೀಸರು, ಆರೋಪಿ ಸಿದ್ದರಾಮಯ್ಯನಿಗೆ ಈಗ ಸರಿಯಾಗಿ ಕಂಬಿ ಎಣಿಸುವಂತೆ ಮಾಡಿದ್ದಾರೆ.
