ʻನಮ್ಮನ್ನೂ ಎಸ್‌ಟಿಗೆ ಸೇರಿಸಿʼ: ಬಿಲ್ಲವ, ಈಡಿಗ ಸೇರಿ 26 ಪಂಗಡಗಳ ಹಕ್ಕುಗಳಿಗಾಗಿ ಪ್ರಣವಾನಂದ ಶ್ರೀ 700 ಕಿ.ಮೀ. ಪಾದಯಾತ್ರೆ

ಮಂಗಳೂರು: ಈಡಿಗ, ಬಿಲ್ಲವ, ನಾಮಧಾರಿ, ಧೀವರ ಸೇರಿದಂತೆ 26 ಪಂಗಡಗಳ ದೀರ್ಘಕಾಲದ ಬೇಡಿಕೆಗಳ ಈಡೇರಿಕೆಗಾಗಿ 2026ರ ಜನವರಿ 6ರಿಂದ ಬೆಂಗಳೂರುವರೆಗೆ 41 ದಿನಗಳ 700 ಕಿಲೋ ಮೀಟರ್ ಉದ್ದದ ಐತಿಹಾಸಿಕ ಪಾದಯಾತ್ರೆ ಕೈಗೊಳ್ಳುವುದಾಗಿ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಡಾ. ಶ್ರೀ ಶ್ರೀ ಶ್ರೀ ಪ್ರಣವಾನಂದ ಸ್ವಾಮೀಜಿ ಘೋಷಿಸಿದ್ದಾರೆ.

ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಸಮುದಾಯದ ಹಕ್ಕುಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸಿ, ಈಡಿಗ–ಬಿಲ್ಲವ–ನಾಮಧಾರಿ–ಧೀವರ ಸೇರಿದಂತೆ 26 ಪಂಗಡಗಳ ಮಂದಿ ಒಗ್ಗಟ್ಟಿನಿಂದ ಈ ಹೋರಾಟಕ್ಕೆ ಬೆಂಬಲಿಸಬೇಕೆಂದು ಕೋರಿದರು.

ಸಮುದಾಯದ ಏಳಿಗೆ ಮತ್ತು ಸಮಾಜಕೇಂದ್ರಿತ ಯೋಜನೆಗಳ ಜಾರಿಗೆ ಅಗತ್ಯವಿರುವ ಅನೇಕ ವಿಷಯಗಳು ಸರ್ಕಾರದ ಮಟ್ಟದಲ್ಲಿ ಬಾಕಿಯಾಗಿವೆ ಎಂದು ಅವರು ದೂರಿದರು. ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂಪಾಯಿ ಬಿಡುಗಡೆ ಮಾಡುವುದು, ಕಲ್ಯಾಣ–ಕರ್ನಾಟಕ ಭಾಗದಲ್ಲಿ ಕುಲಕಸುಬು ಕಳೆದುಕೊಂಡ ಈಡಿಗರಿಗೆ ಭೂಮಿ ಮಂಜೂರು, ಸಮುದಾಯವನ್ನು 2A ಯಿಂದ ST ಮೀಸಲಾತಿಗೆ ವರ್ಗಾವಣೆ ಮಾಡಲು ಶಿಫಾರಸು, ಹಾಗೂ ಬೆಂಗಳೂರಿನ ವಿಧಾನಸೌಧ ಎದುರು ನಾರಾಯಣಗುರುರ ಪುತ್ಥಳಿ ಸ್ಥಾಪನೆ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಅವರು ಉಲ್ಲೇಖಿಸಿದರು.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಸ್ಥಾನ ವಿರುದ್ದ ಹೂಡಿರುವ ಮೊಕ್ಕದ್ದಮೆಗಳನ್ನು ಹಿಂತೆಗೆದು ದೇವಸ್ಥಾನಕ್ಕೆ ಭದ್ರತೆ ಒದಗಿಸಬೇಕು ಎಂಬ ಬೇಡಿಕೆಗೂ ಸ್ವಾಮೀಜಿ ಪ್ರಾಮುಖ್ಯತೆ ನೀಡಿದರು. ಕೋಟಿಚೆನ್ನಯ್ಯರ ಜನ್ಮಸ್ಥಳ ಮತ್ತು ಐಕ್ಯಸ್ಥಳ ಅಭಿವೃದ್ಧಿಗೆ ಪ್ರತಿ ಬಜೆಟ್‌ನಲ್ಲಿ ಸಮರ್ಪಕ ಅನುದಾನ ನೀಡುವುದು, ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ನಾರಾಯಣಗುರು ಅಧ್ಯಯನ ಪೀಠ ಸ್ಥಾಪನೆ, ಹಾಗೂ ಹೆಂಡದ ಮಾರಯ್ಯ ಜಯಂತಿಯನ್ನು ಅಧಿಕೃತವಾಗಿ ಆಚರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.

ಶಿವಮೊಗ್ಗ ಜಿಲ್ಲೆಯ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ಮತ್ತು ಜಮೀನು ನೀಡಿಕೆ, ನಾರಾಯಣಗುರು ಜಯಂತಿ ಸಂದರ್ಭದಲ್ಲಿ ಸಮಾಜದ ಸಾಧಕರಿಗೆ ರಾಜ್ಯಮಾನ್ಯ ಪುರಸ್ಕಾರ, ವಸತಿ ಯೋಜನೆಯಲ್ಲಿ ಸಮಾಜಕ್ಕೆ ಪ್ರತ್ಯೇಕ ಗೃಹ ಮಂಜೂರಾತಿ, ಹಾಗೂ ಎಲ್ಲಾ ಜಿಲ್ಲೆ–ತಾಲೂಕುಗಳಲ್ಲಿ ನಾರಾಯಣಗುರುಭವನ ನಿರ್ಮಾಣಕ್ಕೆ ಭೂಮಿ ನೀಡಿಕೆ ಸೇರಿದಂತೆ ಬೇಡಿಕೆಗಳನ್ನೂ ಅವರು ಮುಂದಿಟ್ಟರು.

ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ ಚೆನ್ನಯ್ಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ನಾಮಕರಣ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಅಗತ್ಯವಿದೆ ಎಂದು ಸ್ವಾಮೀಜಿ ಹೇಳಿದರು. ಜೊತೆಗೆ, ಸಮುದಾಯದ ಟ್ರಸ್ಟ್‌ಗೆ ಮೆಡಿಕಲ್ ಕಾಲೇಜು ಮಂಜೂರಾತಿ ಹಾಗೂ ಮಂಗಳೂರು, ಶಿವಮೊಗ್ಗ, ಉಡುಪಿ, ಕಾರವಾರಗಳಲ್ಲಿ ನಾಗರಿಕ ಸೇವಾ ತರಬೇತಿ ಕೇಂದ್ರಗಳ ಸ್ಥಾಪನೆಗಾಗಿ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಐತಿಹಾಸಿಕ ಪಾದಯಾತ್ರೆಗೆ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠ, ಆರ್ಯ ಈಡಿಗ ಸಂಘ, ಕಲ್ಯಾಣ–ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ, ರಾಷ್ಟ್ರೀಯ ಈಡಿಗ ಮಹಾಮಂಡಳಿ ಸೇರಿದಂತೆ 26 ಪಂಗಡಗಳ ಮುಖಂಡರು ಮತ್ತು ಸದಸ್ಯರು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.

ಸಮುದಾಯದ ಹಕ್ಕು–ಹಿತಗಳ ಪರ ಹೋರಾಟದ ಪ್ರಮುಖ ಘಟ್ಟವಾಗಲಿರುವ ಈ ಪಾದಯಾತ್ರೆ ಜನವರಿ 6ರಿಂದ ಪ್ರಾರಂಭಗೊಳ್ಳಲಿದ್ದು, ಸಮಾಜದ ಎಲ್ಲ ವರ್ಗಗಳ ಸಹಕಾರ ಅಗತ್ಯವಿದೆ ಎಂದು ಸ್ವಾಮೀಜಿ ಹೇಳಿದರು.

ಶೇಂದಿ ಆರೋಗ್ಯಕ್ಕೆ ಒಳ್ಳೆಯದು ಎಂದು ಪ್ರಣವಾನಂದ ಸ್ವಾಮಿ!

ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪ್ರಣವಾನಂದ ಸ್ವಾಮೀಜಿ, ಶೇಂದಿ ಆರೋಗ್ಯಕ್ಕೆ ಒಳ್ಳೆಯದು ಎಂದರು. ದಕ್ಷಿಣ ಕನ್ನಡ, ಉಡುಪಿ ಹೊರತು ಪಡಿಸಿ ರಾಜ್ಯದಲ್ಲಿ ಶೇಂದಿ ಇಳಿಸುವುದುನ್ನು ನಿಷೇಧಿಸಲಾಗಿದೆ. ಇದರಿಂದ ನಮ್ಮ ಸಮುದಾಯವದವರು ಮೂಲ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದರು.

ಈ ರಾಜ್ಯದಲ್ಲಿ ಮದ್ಯ ಬೇಡ ಅಂದ್ರೆ ಪಬ್ಬು, ಬಾರ್‌, ಗುಡ್ಕಾ ಇದೆಲ್ಲವನ್ನೂ ಬಂದ್‌ ಮಾಡಿ. ರಾಜ್ಯಕ್ಕೆ ವರ್ಷದಲ್ಲಿ 35 ಸಾವಿರದಿಂದ 45 ಸಾವಿರ ಕೋಟಿಯಷ್ಟು ಆದಾಯ ಮದ್ಯದಿಂದ ಬರುತ್ತದೆ. ಮದ್ಯ ಇಲ್ಲ ಅಂತ ಇದ್ದಿದ್ರೆ ಹಲವಾರು ಜನರು ಮೆಂಟಲ್‌ ಆಗ್ತಾ ಇದ್ರು. ಕೋವಿಡ್‌ ಟೈಮಲ್ಲಿ ಎಷ್ಟೋ ಮಂದಿ ಡಿಪ್ರೆಷನ್‌ಗೆ ಹೋಗಿದ್ದರು. ಹಾಗೆಂದು ಎಲ್ಲರೂ ಕುಡಿಯಿರಿ ಅಂತ ಹೇಳ್ತಾ ಇಲ್ಲ. ನಾನು ದೇಶಾದ್ಯಂತ ಸುತ್ತಾಡಿದ್ದೇನೆ. ಇವತ್ತಿನ ವ್ಯವಸ್ಥೆಯಲ್ಲಿ ಮದ್ಯ ಎಲ್ಲಿ ಇಲ್ಲ ಹೇಳಿ. ಎಲ್ಲಾ ಕಡೆ ಇದೆ. ಹಾಗೆಂದು ಅದೇ ಉತ್ತಮ ಅಂತ ಹೇಳ್ತಾ ಇಲ್ಲ ಎಂದು ನುಡಿದರು.

ನಮ್ಮ ಬಿಲ್ಲವರು, ಈಡಿಗರು ಅವರು ಮೂಲ ಕಸುಬು ಕೃಷಿ, ವೈದ್ಯ ಹಾಗೂ ಶೇಂದಿ ಇಳಿಸಿ ಮಾರುವುದು. ಶೇಂದಿ ಅಂದ್ರೆ ಅದಕ್ಕೆ ಪೌಡರ್‌ ಮಿಕ್ಸ್‌ ಮಾಡಿದ್ರೆ ಒಪ್ಪಲ್ಲ. ಶೇಂದಿ ಎನ್ನುವುದು ಒಂದು ರೀತಿಯಲ್ಲಿ ಔಷಧಿ. ಈಚಲು, ತೆಂಗು, ತಾಳೆ ಮರ ಇತ್ಯಾದಿ ಮರಗಳಿಂದ ಶೇಂದಿ ಇಳಿಸಿ ಕುಡಿದ್ರೆ ಆರೋಗ್ಯಕ್ಕೆ ಭಾರೀ ಒಳ್ಳೆಯದು. ಸ್ವಲ್ಪ ದಿನ ಕಳೆದ ಮೇಲೆ ಅದು ಫ್ಲೈಟ್‌ ಅಲ್ಲಿ ಬರಲಿದೆ. ನಮ್ಮಿಂದ ಬಂದ್‌ ಮಾಡಿಸ್ತಾ ಇರ್ಬಹುದು, ನಾಳೆ ಅದನ್ನು ಒಳ್ಳೆ ಬಾಟಲಲ್ಲಿ ಹಾಕಿ ಮುಂದುವರಿದ ವರ್ಗ ಅದನ್ನು ಮಾರಲು ಶುರು ಮಾಡಿದಾಗ ಆಗ ಸರಿ ಅಂತ ಹೇಳ್ತಾರೆ. 500 ಹೊಸ ಬಾರ್‌ಗಳನ್ನು ಸರ್ಕಾರ ಕೊಡಲು ಮುಂದಾಗಿದೆ. ಇದನ್ನು ನಾನು ತೀವ್ರವಾಗಿ ಖಂಡಿಸ್ತಾ ಇದ್ದೇನೆ. ನಮ್ಮ ಪಂಗಡದವರು ಶೇಂದಿ ಕಸುಬು ಕಳೆದುಕೊಂಡಿರುವುದರಿಂದ ಲಿಕ್ಕರ್‌ ಬಿಸ್‌ನೆಸ್‌ನಲ್ಲಿ ನಮ್ಮ ಪಂಗಡದವರಿಗೆ ರಿಸರ್ವೇಷನ್‌ ಕೊಡ್ಬೇಕು ಎಂದು ಆಗ್ರಹಿಸಿದರು.

error: Content is protected !!