ನವದೆಹಲಿ: ಕೆಂಪು ಕೋಟೆ ಬಳಿ ಕಾರು ಸ್ಫೋಟಗೊಂಡ ಸ್ಥಳದಿಂದ ದೆಹಲಿ ಪೊಲೀಸರು ಮೂರು 9 ಎಂಎಂ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದ್ದು, ಈ ಮೂಲಕ ಪ್ರಕರಣಧಲ್ಲಿ ಭಯೋತ್ಪಾದಕ ನಂಟು ಅನುಮಾನ ದಟ್ಟವಾಗುವಂತೆ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ವೇಳೆ ಕಾರ್ಟ್ರಿಡ್ಜ್ ಗಳು ಸಿಕ್ಕಿದ್ದು ಎರಡು ಕಾರ್ಟ್ರಿಜ್‌ಗಳು ಜೀವಂತ ಗುಂಡುಗಳಾಗಿದ್ದರೆ, ಮೂರನೆಯದು ಖಾಲಿ ಶೆಲ್ ಆಗಿದೆ ಎಂದು ತಿಳಿದು ಬಂದಿದೆ.
ಸ್ಥಳದಲ್ಲಿ ಯಾವುದೇ ಪಿಸ್ತೂಲ್ ಅಥವಾ ಶಸ್ತ್ರಾಸ್ತ್ರಗಳು ಪತ್ತೆಯಾಗಿಲ್ಲ, ಈ ಕಾರ್ಟ್ರಿಡ್ಜ್‌ಗಳನ್ನು ಸಾಮಾನ್ಯವಾಗಿ ಸಶಸ್ತ್ರ ಪಡೆಗಳು ಅಥವಾ ವಿಶೇಷ ಅನುಮತಿ ಹೊಂದಿರುವವರು ಮಾತ್ರ ಹೊಂದಿರುತ್ತಾರೆ. ಶಂಕಿತನ ಬಳಿ ಈ ಕಾರ್ಟ್ರಿಡ್ಜ್ ಗಳಿದ್ದವೇ ಎಂಬುದರ ಕುರಿತು ಅನುಮಾನಗಳು ಮೂಡತೊಡಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ನಡುವೆ ಕಾರ್ಟ್ರಿಡ್ಜ್ ಗಳು ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಸೇರಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗಿದೆ. ಇದೀಗ ಎಫ್‌ಎಸ್‌ಎಲ್ ತಂಡವು ಸ್ಥಳದಿಂದ ಕಾರ್ಟ್ರಿಡ್ಜ್‌ಗಳು, ಜೀವಂತ ಗುಂಡುಗಳು ಮತ್ತು ಬಳಸಿದ ಸ್ಫೋಟಕಗಳ ಅವಶೇಷಗಳು ಸೇರಿದಂತೆ 40 ಕ್ಕೂ ಹೆಚ್ಚು ಪುರಾವೆಗಳನ್ನು ಸಂಗ್ರಹಿಸಿದ್ದು, ಉನ್ನತ ಮಟ್ಟದ ತನಿಖೆ ಆರಂಭವಾಗಿದೆ.
ನವೆಂಬರ್ 10ರ ಸಂಜೆ ದೆಹಲಿಯ ಕೆಂಪು ಕೋಟೆ ಬಳಿ ಚಲಿಸುತ್ತಿದ್ದ ಹುಂಡೈ ಐ20 ಕಾರಿನೊಳಗೆ ಸಂಭವಿಸಿರುವ ಸ್ಫೋಟದಲ್ಲಿ 13 ಜನರು ಸಾವನ್ನಪ್ಪಿದ್ದು, 29 ಜನ ಗಾಯಗೊಂಡಿದ್ದಾರೆ. ಸ್ಫೋಟದ ವೇಳೆ ಹತ್ತಿರವೇ ಇದ್ದ ಅನೇಕ ವಾಹನಗಳು ಸುಟ್ಟುಹೋಗಿದ್ದು, ಹರಿಯಾಣ ನೋಂದಣಿ ಸಂಖ್ಯೆಯನ್ನು ಹೊಂದಿರುವ ಕಾರಿನಲ್ಲಿ ಸಂಭವಿಸಿದ ಈ ಘಟನೆ ದೆಹಲಿ ಪೊಲೀಸರು, ಎನ್‌ಐಎ, ಎನ್‌ಎಸ್‌ಜಿ ಮತ್ತು ವಿಧಿವಿಜ್ಞಾನ ತಂಡಗಳಿಂದ ಉನ್ನತ ಮಟ್ಟದ ತನಿಖೆಗೆ ಕಾರಣವಾಗಿದೆ.

ಪ್ರಕರಣ ಸಂಬಂಧ ಯುಎಪಿಎ ಮತ್ತು ಸ್ಫೋಟಕ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಭದ್ರತಾ ತಪಾಸಣೆಯೊಂದಿಗೆ ಕಟ್ಟೆಚ್ಚರ ವಹಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಶುಕ್ರವಾರ ಜಮ್ಮು ಮತ್ತು ಕಾಶ್ಮೀರ ಮೂಲದ ನಾಲ್ವರು ವೈದ್ಯರಾದ ಡಾ. ಮುಜಾಫರ್ ಅಹ್ಮದ್, ಡಾ. ಅದೀಲ್ ಅಹ್ಮದ್ ರಾಥರ್, ಡಾ. ಮುಜಾಮಿಲ್ ಶಕೀಲ್ ಮತ್ತು ಡಾ. ಶಾಹೀನ್ ಸಯೀದ್ ಅವರ ನೋಂದಣಿಯನ್ನು ಭಾರತೀಯ ವೈದ್ಯಕೀಯ ನೋಂದಣಿ/ರಾಷ್ಟ್ರೀಯ ವೈದ್ಯಕೀಯ ನೋಂದಣಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದೆ.
ಭಯೋತ್ಪಾದನಾ ಪ್ರಕರಣಗಳೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ದೆಹಲಿ ಪೊಲೀಸರು ಈಗಾಗಲೇ ಡಾ. ಅದೀಲ್ ಅಹ್ಮದ್ ರಾಥರ್, ಡಾ. ಮುಜಾಮಿಲ್ ಶಕೀಲ್ ಮತ್ತು ಡಾ. ಶಾಹೀನ್ ಸಯೀದ್ ಅವರನ್ನು ಬಂಧಿಸಿದ್ದಾರೆ.