ನುಹ್/ನವದೆಹಲಿ: ನವೆಂಬರ್ 10 ರಂದು ದೆಹಲಿ ಕೆಂಪು ಕೋಟೆ ಬಳಿ ನಡೆದ ಮಾರಕ ಸ್ಫೋಟದಲ್ಲಿ 13 ಮಂದಿ ಸಾವಿಗೀಡಾದ ಪ್ರಕರಣದಲ್ಲಿ ಸ್ಫೋಟಕ ಮಾಹಿತಿಗಳು ಬಹಿರಂಗಗೊಂಡಿದೆ. ತನಿಖೆ ಪ್ರಕಾರ, ಆತ್ಮಹತ್ಯೆ ಬಾಂಬರ್ ಡಾ. ಉಮರ್ ಸ್ಫೋಟಕ್ಕೂ ಮೊದಲು ಹರಿಯಾಣದ ನುಹ್‌ನ ಹಿದಾಯತ್ ಕಾಲೋನಿಯಲ್ಲಿರುವ ಬಾಡಿಗೆ ಮನೆಯಲ್ಲಿ 10 ದಿನಗಳ ಕಾಲ ಅಡಗಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಉಮರ್ ಅಡಗಿಕೊಂಡಿದ್ದ ಕೊಠಡಿ ದೆಹಲಿ–ಅಲ್ವಾರ್ ರಸ್ತೆಯಲ್ಲಿರುವ ಮಹಿಳೆಯೊಬ್ಬರ ಮನೆಯಾಗಿದೆ. ಈ ಕೊಠಡಿಯನ್ನು ಅಲ್ ಫಲಾಹ್ ವಿಶ್ವವಿದ್ಯಾಲಯದ ಎಲೆಕ್ಟ್ರಿಷಿಯನ್ ಆಗಿರುವ ಶೋಯೆಬ್ ವ್ಯವಸ್ಥೆ ಮಾಡಿದ್ದಾನೆ ಎಂದು ತನಿಖೆ ತಿಳಿಸಿದೆ. ಶೋಯೆಬ್‌ನ ಅತ್ತಿಗೆ ಈ ಮನೆಯ ಮಾಲಕಿ ಎನ್ನಲಾಗಿದೆ. ಶೋಯೆಬ್ ಈಗ ಪೊಲೀಸರ ವಶದಲ್ಲಿದ್ದಾನೆ.

ಪೊಲೀಸ್ ಮೂಲಗಳ ಪ್ರಕಾರ, ಸ್ಫೋಟದ ದಿನವಾದ ನವೆಂಬರ್ 10 ರಂದು, ಡಾ. ಉಮರ್ ತನ್ನ ಬಾಡಿಗೆ ಮನೆಯಿಂದ ಹುಂಡೈ i20 ಕಾರಿನಲ್ಲಿ ಸ್ಫೋಟಕ ವಸ್ತುಗಳನ್ನು ಹೊತ್ತು ಹೊರಟಿದ್ದಾನೆ. ಹಿದಾಯತ್ ಕಾಲೋನಿಗೆ ಪ್ರವೇಶಿಸುವಾಗ ಕಾರು ಸಿಸಿಟಿವಿಯಲ್ಲಿ ಸೆರೆಯಾಗಿದ್ದರೂ, ನಂತರ ಯಾವ ದಾರಿಯಲ್ಲಿ ದೆಹಲಿಗೆ ತೆರಳಿದ ಎಂಬುದು ಇನ್ನೂ ತಿಳಿದಿಲ್ಲ.
ಉಮರ್ ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಸಹಾಯಕ ಪ್ರಾಧ್ಯಾಪಕನಾಗಿದ್ದನು. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಕಾರು ಅಕ್ಟೋಬರ್ 29 ರಂದು ವಿಶ್ವವಿದ್ಯಾಲಯಕ್ಕೆ ಪ್ರವೇಶಿಸಿದೆ. ಅಲ್ಲಿಂದ ಅಕ್ಟೋಬರ್ 30 ರಂದು ಮಧ್ಯಾಹ್ನ 2:41ಕ್ಕೆ ಹೊರಟಿದೆ. ಅದೇ ದಿನ ಜಮ್ಮು–ಕಾಶ್ಮೀರ ಪೊಲೀಸರು ಅವರ ಸಹೋದ್ಯೋಗಿ ಡಾ. ಮುಜಮ್ಮಿಲ್ ಅಹ್ಮದ್ ಗನೈ ಅವರನ್ನು ಬಂಧಿಸಿದ ನಂತರ ಅವರು ಪರಾರಿಯಾಗಿರುವುದು ಸ್ಪಷ್ಟವಾಗಿದೆ. ಇದೇ ವೇಳೆ, ಹೊಸ ಸಿಸಿಟಿವಿ ದೃಶ್ಯಾವಳಿಯಲ್ಲಿ ಅವರ i20 ಕಾರು ನುಹ್‌ನಿಂದ ಟೋಲ್ ಬೂತ್ ಕಡೆಗೆ ಸಾಗುತ್ತಿರುವುದು ಕಂಡುಬಂದಿದೆ.
ಸ್ಫೋಟದ ಬಳಿಕ ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯ ಪೊಲೀಸರು ಕಣ್ಗಾವಲು ಹೂಡಿರುವ ಸ್ಥಳವಾಗಿದೆ.

ಅನುಮಾನಗಳು:
ವಿಶ್ವವಿದ್ಯಾಲಯದ ಕೆಲವು ವೈದ್ಯರು ದೆಹಲಿಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಸಂಚಿನಲ್ಲಿ ಭಾಗಿಯಾಗಿರುವ ಶಂಕೆ ಇದೆ. 17ನೇ ಕಟ್ಟಡವನ್ನು ‘ಡಾಕ್ಟರ್ ಟೆರರಿಸ್ಟ್’ಗಳ ಸಭೆ ಸ್ಥಳವಾಗಿ ಬಳಸಲಾಗಿದೆ. ಡಾ. ಮುಜಮ್ಮಿಲ್ ಬಳಸುತ್ತಿದ್ದ ಮತ್ತೊಂದು ಕೊಠಡಿಯಲ್ಲಿ ರಾಸಾಯನಿಕ ಮಿಶ್ರಣ, ಅಮೋನಿಯಂ ನೈಟ್ರೇಟ್–ಆಕ್ಸೈಡ್ ಬಳಸಿ ಸ್ಫೋಟಕ ತಯಾರಿಕೆ ನಡೆದಿದ್ದ ಆರೋಪವಿದೆ. ಆದರೆ ವಿಶ್ವವಿದ್ಯಾಲಯ ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿ ಹಾಕಿದೆ.
ಕೆಂಪು ಕೋಟೆ ಮತ್ತು ಮೆಟ್ರೋ ನಿಲ್ದಾಣ ಮತ್ತೆ ಓಪನ್:
ಸ್ಫೋಟದ ಆರು ದಿನಗಳ ಬಳಿಕ, ಇಂದು ಭಾನುವಾರ ಕೆಂಪು ಕೋಟೆ ಪುನಃ ಸಾರ್ವಜನಿಕರಿಗೆ ತೆರೆಯಲಾಯಿತು. ಸ್ಫೋಟದ ಕಂಪನ ಅನುಭವಿಸಿದ್ದ ಲಾಲ್ ಕಿಲಾ ಮೆಟ್ರೋ ನಿಲ್ದಾಣದ ಎಲ್ಲಾ ಗೇಟ್‌ಗಳನ್ನೂ ಮತ್ತೆ ತೆರೆಯಲಾಗಿದೆ. ಭದ್ರತಾ ಕಾರಣಕ್ಕೆ ಈ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು.