ಬೆಳ್ತಂಗಡಿ: ಕುತ್ಲೂರಿನಲ್ಲಿ ನಡೆದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ 71 ವರ್ಷದ ಇತ್ತೆ ಬರ್ಪೆ ಅಬೂಬಕರ್‌ನನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಉಡುಪಿ ಜಿಲ್ಲೆಯ ಶಿರ್ವದಲ್ಲಿ ನಡೆದ ಮತ್ತೊಂದು ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿ ಎರಡು ತಿಂಗಳು ಜೈಲು ಶಿಕ್ಷೆ ಅನುಭವಿಸಿ ಇತ್ತಿಚೆಗೆ ಬಿಡುಗಡೆಯಾಗಿದ್ದು, ಇದೀಗ ಮತ್ತೆ ಜೈಲು ಸೇರುವಂತಾಗಿದೆ.

ನಾರವಿ ಗ್ರಾಮದ ಕುತ್ಲೂರಿನ ಮಂಜುಶ್ರೀ ನಗರದ ಶಿಕ್ಷಕ ಅವಿನಾಶ್ ಅವರ ಮನೆಯಲ್ಲಿ ಅಕ್ಟೋಬರ್ 2ರಿಂದ 6ರ ನಡುವೆ ಯಾರೂ ಇಲ್ಲದ ವೇಳೆ ₹9.5 ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿತ್ತು. ಈ ಕುರಿತು ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ವೇಳೆ ಸಬ್ ಇನ್ಸ್‌ಪೆಕ್ಟರ್ ಓಮನ ಹಾಗೂ ತಂಡ ನವೆಂಬರ್ 11ರಂದು ರಾತ್ರಿ ವೇಣೂರು ಕುಂಭಶ್ರೀ ಬಳಿ ವಾಹನ ತಪಾಸಣೆ ನಡೆಸಿದಾಗ, ಅನುಮಾನಾಸ್ಪದವಾಗಿ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ಅಬೂಬಕರ್ ಅವರನ್ನು ತಡೆದು ವಿಚಾರಣೆ ನಡೆಸಿದರು. ಪರಿಶೀಲನೆಯ ವೇಳೆ ಅವರು ಮಂಗಳೂರಿನಲ್ಲಿಯೂ ಕಳ್ಳತನ ಮಾಡಿರುವುದು ಪತ್ತೆಯಾಯಿತು.
ಆರೋಪಿಯನ್ನು ನವೆಂಬರ್ 12ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
