ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಗುಪ್ತಚರ ಸಂಸ್ಥೆಗಳು ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (JeM) ಮತ್ತು ಅಲ್-ಖೈದಾ ಸಂಯೋಜಿತ ಅನ್ಸರ್ ಘಜ್ವತ್-ಉಲ್-ಹಿಂದ್ (AGH) ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಅಂತರ-ರಾಜ್ಯ ಮತ್ತು ಅಂತರರಾಷ್ಟ್ರೀಯ ಭಯೋತ್ಪಾದಕ ಜಾಲವನ್ನು ಭೇದಿಸಿ, ಭಾರತದ ಭದ್ರತಾ ವಲಯವನ್ನು ನಡುಗಿಸುವ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಭಯೋತ್ಪಾದಕರಾದ ಡಾಕ್ಟರ್ಸ್
ತನಿಖೆ ವೇಳೆ, ಹರಿಯಾಣದ ಫರಿದಾಬಾದ್‌ನ ಅಲ್-ಫಲಾಹ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯ ಮುಜಮ್ಮಿಲ್ ಶಕೀಲ್ ಹಾಗೂ ಅನಂತನಾಗ್ ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯ ಆದಿಲ್ ಅಹ್ಮದ್ ರಾಥರ್ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಬಹಿರಂಗವಾಯಿತು. ಇವರ ನಿವಾಸ ಮತ್ತು ಲಾಕರ್‌ಗಳಲ್ಲಿ 3,000 ಕೆಜಿ ಬಾಂಬ್ ತಯಾರಿಕಾ ವಸ್ತುಗಳು, 350 ಕೆಜಿ ಅಮೋನಿಯಂ ನೈಟ್ರೇಟ್, ಟೈಮರ್‌ಗಳು, ಅಸಾಲ್ಟ್ ರೈಫಲ್‌ಗಳು, ಪಿಸ್ತೂಲ್‌ಗಳು ಹಾಗೂ ಮದ್ದುಗುಂಡುಗಳ ದೊಡ್ಡ ಸಂಗ್ರಹ ಪತ್ತೆಯಾಗಿದೆ.
ಆದಿಲ್ ರಾಥರ್ ಶ್ರೀನಗರದಲ್ಲಿ ಜೈಶ್ ಪರ ಪ್ರಚಾರ ಪೋಸ್ಟರ್‌ಗಳನ್ನು ಅಂಟಿಸುತ್ತಿದ್ದ ದೃಶ್ಯಾವಳಿಗಳ ಆಧಾರದ ಮೇಲೆ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಬಂಧಿಸಲ್ಪಟ್ಟರು. ಶಕೀಲ್ ಪುಲ್ವಾಮಾದವರು ಮತ್ತು ರಾಥರ್ ಕುಲ್ಗಾಮ್ ಮೂಲದವರು ಎಂದು ಗುರುತಿಸಲಾಗಿದೆ.
ವೈದ್ಯರು ಸೇರಿದಂತೆ ಏಳು ಮಂದಿ ಬಂಧನ
ಈ ಇಬ್ಬರ ಜೊತೆಗೆ ಇನ್ನೂ ಐದು ಮಂದಿ – ಶ್ರೀನಗರದ ಆರಿಫ್ ನಿಸಾರ್ ದಾರ್, ಯಾಸಿರ್-ಉಲ್-ಅಶ್ರಫ್, ಮಕ್ಸೂದ್ ಅಹ್ಮದ್ ದಾರ್, ಶೋಪಿಯಾನ್‌ನ ಮೌಲ್ವಿ ಇರ್ಫಾನ್ ಅಹ್ಮದ್, ಹಾಗೂ ಗಂಡರ್ಬಾಲ್‌ನ ಜಮೀರ್ ಅಹಂಗರ್ ಬಂಧಿತರಾಗಿದ್ದಾರೆ. ಇವರಲ್ಲಿ ಕೆಲವರು ವೈದ್ಯಕೀಯ ಅಥವಾ ತಾಂತ್ರಿಕ ವೃತ್ತಿಜೀವನದಲ್ಲಿದ್ದ “ವೈಟ್-ಕಾಲರ್” ಭಯೋತ್ಪಾದಕರು ಎನ್ನಲಾಗಿದೆ.
ಅಲ್-ಫಲಾಹ್ ಆಸ್ಪತ್ರೆಯ ಮಹಿಳಾ ವೈದ್ಯೆಯ ಕಾರಿನಿಂದ ಅಸಾಲ್ಟ್ ರೈಫಲ್ ಪತ್ತೆಯಾದ ಹಿನ್ನೆಲೆಯಲ್ಲಿ ಆಕೆಯ ಮೇಲೂ ತನಿಖೆ ನಡೆಯುತ್ತಿದೆ.
ಪತ್ತೆಯಾದ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ವಸ್ತುಗಳು:

ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳಲ್ಲಿ ಇಟಾಲಿಯನ್ ಬೆರೆಟ್ಟಾ ಪಿಸ್ತೂಲ್, ರಷ್ಯಾದ ಕ್ರಿಂಕೋವ್ ಅಸಾಲ್ಟ್ ರೈಫಲ್ (AK-74 ರೂಪಾಂತರ) ಸೇರಿದಂತೆ ಹೈ-ಕ್ಯಾಲಿಬರ್ ಗನ್‌ಗಳು ಸೇರಿವೆ. ಜೊತೆಗೆ, ಐಇಡಿ ತಯಾರಿಸಲು ಬೇಕಾದ ರಾಸಾಯನಿಕಗಳು, ತಂತಿಗಳು, ಬ್ಯಾಟರಿಗಳು, ಎಲೆಕ್ಟ್ರಾನಿಕ್ ಸರ್ಕ್ಯೂಟ್‌ಗಳು, ಟೈಮರ್‌ಗಳು ಹಾಗೂ ರಿಮೋಟ್ ಕಂಟ್ರೋಲ್ ಸಾಧನಗಳು ಸಹ ಪತ್ತೆಯಾಗಿದೆ.
ಗುಪ್ತಚರ ಇಲಾಖೆಯ ಪ್ರಕಾರ, ಈ ವೃತ್ತಿಪರರನ್ನು ಪಾಕಿಸ್ತಾನ ಹಾಗೂ ಇತರ ದೇಶಗಳಲ್ಲಿ ನೆಲೆಸಿರುವ ಹ್ಯಾಂಡ್ಲರ್‌ಗಳು ನಿರ್ವಹಿಸುತ್ತಿದ್ದರು. ಇವರ ಮೂಲಕ ಹಣದ ಹಾದಿಯನ್ನು ಟ್ರ್ಯಾಕ್ ಮಾಡಲು ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಹಣದ ಮೂಲ ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ.

ಪಾಕಿಸ್ತಾನ ಜೊತೆ ರಹಸ್ಯ ಮೈತ್ರಿ
ಇತ್ತೀಚಿನ ಗುಪ್ತಚರ ವರದಿಗಳ ಪ್ರಕಾರ, ಪಾಕಿಸ್ತಾನದ ಇಂಟರ್-ಸರ್ವಿಸ್ ಇಂಟೆಲಿಜೆನ್ಸ್ (ISI) ಸಂಸ್ಥೆ ಲಷ್ಕರ್-ಎ-ತೈಬಾ (LeT) ಮತ್ತು ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ (ISKP) ನಡುವಿನ ಹೊಸ ಮೈತ್ರಿಯನ್ನು ರೂಪಿಸುತ್ತಿದ್ದು, ಭಾರತದ ವಿರುದ್ಧ ಹೊಸ ತಂತ್ರದ ದಾಳಿ ಯೋಜನೆ ರೂಪಿಸಲಾಗಿದೆ.
ಆಪರೇಷನ್ ಸಿಂಧೂರ್‌ಗೆ ಪ್ರತೀಕಾರ
ಆಪರೇಷನ್ ಸಿಂದೂರ್ನ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಚಟುವಟಿಕೆಗಳು ಮತ್ತೊಮ್ಮೆ ಚುರುಕುಗೊಂಡಿದ್ದು, ಇತ್ತೀಚಿನ ವಶಪಡಿಸಿಕೊಳ್ಳುವಿಕೆಯಿಂದ “ವೈದ್ಯರ ಮುಖವಾಡದಲ್ಲಿನ ಭಯೋತ್ಪಾದಕರು” ಎಂಬ ಹೊಸ ಸವಾಲು ಎದುರಾಗುತ್ತಿದೆ. ಭಾರತದ ಆಪರೇಷನ್ ಸಿಂಧೂರ್‌ಗೆ ಪ್ರತೀಕಾರಕ್ಕೆ ಮುಂದಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಭದ್ರತಾ ಸಂಸ್ಥೆಗಳ ಸಂಯುಕ್ತ ಕಾರ್ಯಾಚರಣೆಯ ಫಲವಾಗಿ, ವೈದ್ಯರು ಸೇರಿದಂತೆ ವೃತ್ತಿಪರರ ಮುಖವಾಡದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂತರರಾಷ್ಟ್ರೀಯ ಭಯೋತ್ಪಾದಕ ಜಾಲ ಪತ್ತೆಯಾಗಿದೆ. ಪಾಕಿಸ್ತಾನದ ನೆರವಿನಿಂದ ದೇಶದೊಳಗೆ ನಡೆಯುತ್ತಿದ್ದ ಈ “ವೈಟ್-ಕಾಲರ್ ಟೆರರ್ ನೆಟ್‌ವರ್ಕ್” ಬಯಲಾಗಿದ್ದು, ಭವಿಷ್ಯದಲ್ಲಿನ ಭಯೋತ್ಪಾದಕ ದಾಳಿಗಳನ್ನು ತಡೆಯುವಲ್ಲಿ ಇದು ಪ್ರಮುಖ ಹಂತವೆಂದು ಅಧಿಕಾರಿಗಳು ತಿಳಿಸಿದ್ದಾರೆ.