ಅಹಮದಾಬಾದ್ (ಗುಜರಾತ್): ಮೆಣಸಿನ ಪುಡಿ ಎರಚಿ ಚಿನ್ನ ಎಗರಿಸಲು ಜ್ಯುವೆಲ್ಲರಿಗೆ ಬಂದ ದರೋಡೆಗಾರ್ತಿಯ ಕೆನ್ನೆಗೆ 25 ಸೆಕೆಂಡುಗಳಲ್ಲಿ 20 ಬಾರಿ ಕಪಾಳಮೋಕ್ಷ ಮಾಡುವ ಮೂಲಕ ವೈರಲ್ ಆಗಿದ್ದಾನೆ.

ಅಹಮದಾಬಾದ್‌ನಲ್ಲಿ ನವೆಂಬರ್ 3ರಂದು ಮಧ್ಯಾಹ್ನ 12.30ರ ಸುಮಾರಿಗೆ ರಾಣಿಪ್ ತರಕಾರಿ ಮಾರುಕಟ್ಟೆ ಸಮೀಪದ ಜ್ಯುವೆಲ್ಲರಿಯಲ್ಲಿ ಈ ಘಟನೆ ನಡೆದಿದ್ದು, ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದುಪಟ್ಟಾದಿಂದ ಮುಖ ಮುಚ್ಚಿಕೊಂಡಿದ್ದ ಮಹಿಳೆ ಗ್ರಾಹಕೆಯಂತೆ ಅಂಗಡಿಗೆ ಪ್ರವೇಶಿಸಿ, ಕೆಲ ಕ್ಷಣಗಳ ನಂತರ ವ್ಯಾಪಾರಿಯ ಕಣ್ಣಿಗೆ ಮೆಣಸಿನ ಪುಡಿ ಎಸೆದು ದರೋಡೆ ಮಾಡಲು ಪ್ರಯತ್ನಿಸಿದ್ದಾಳೆ. ಆದರೆ ಪುಡಿ ಅವನ ಕಣ್ಣಿಗೆ ಬೀಳದ ಕಾರಣ ವ್ಯಾಪಾರಿ ತಕ್ಷಣ ಎದ್ದು ಆಕೆಗೆ ಪದೇಪದೇ ಹೊಡೆದಿದ್ದಾನೆ. ಸುಮಾರು 25 ಸೆಕೆಂಡುಗಳಲ್ಲಿ 20 ಬಾರಿ ಕಪಾಳಮೋಕ್ಷ ಮಾಡಿದ ಬಳಿಕ ಆಕೆಯನ್ನು ಅಂಗಡಿಯಿಂದ ಹೊರಗೆ ಎಳೆದಿದ್ದಾನೆ.

ಘಟನೆಯ ನಂತರ ವ್ಯಾಪಾರಿಯು ಯಾವುದೇ ದೂರು ದಾಖಲಿಸಲು ನಿರಾಕರಿಸಿದ್ದಾನೆ, ಆದರೆ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಮಹಿಳೆಯ ಪತ್ತೆಗೆ ರಾಣಿಪ್ ಪೊಲೀಸ್ ಠಾಣೆ ತನಿಖೆ ಆರಂಭಿಸಿದೆ.
ಪೊಲೀಸ್ ಇನ್ಸ್‌ಪೆಕ್ಟರ್ ಕೇತನ್ ವ್ಯಾಸ್, “ದೂರುದಾರರನ್ನು ಎರಡು ಬಾರಿ ಭೇಟಿಯಾಗಿ ದೂರು ದಾಖಲಿಸಲು ಕೇಳಿದ್ದೇವೆ. ಅವರು ದೂರು ನೀಡಲು ಒಲವು ತೋರದಿದ್ದರೂ, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ತನಿಖೆ ಮುಂದುವರಿಸಲಾಗಿದೆ,” ಎಂದು ಹೇಳಿದರು.
ಅಹಮದಾಬಾದ್ ಪೊಲೀಸರು ಎಕ್ಸ್ ನಲ್ಲಿ ನೀಡಿದ ಹೇಳಿಕೆಯಲ್ಲಿ, ಆರೋಪಿಯನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ದೃಢಪಡಿಸಿದ್ದಾರೆ.