ಕೇರಳ : ಮೊದಲ ಪತ್ನಿ ವಿರೋಧಿಸಿದರೆ ಮುಸ್ಲಿಂ ಪುರುಷರಿಗೆ ಎರಡನೇ ವಿವಾಹ ನೋಂದಣಿಗೆ ಅವಕಾಶ ಇಲ್ಲ ಎಂದು ಕೇರಳ ಹೈಕೋರ್ಟ್ ಆದೇಶ ನೀಡಿದೆ.

ಕೇರಳ ವಿವಾಹ ನೋಂದಣಿ ನಿಯಮಗಳ ಪ್ರಕಾರ ಮುಸ್ಲಿಂ ಪುರುಷನ ಎರಡನೇ ವಿವಾಹವನ್ನು ಮೊದಲ ಪತ್ನಿಗೆ ತಿಳಿಸದೆ ಮತ್ತು ವಿಚಾರಣೆಯನ್ನು ನಡೆಸದೇ ಎರಡನೇ ಮದುವೆ ನೋಂದಾಯಿಸುವಂತಿಲ್ಲ ಎಂದು ತೀರ್ಪು ನೀಡಿದೆ. ಮುಸ್ಲಿಂ ವೈಯಕ್ತಿಕ ಕಾನೂನು ಪುರುಷರಿಗೆ ಬಹು ಪತ್ನಿಯರನ್ನು ಹೊಂದಲು ಅವಕಾಶ ನೀಡುತ್ತದೆಯಾದರೂ ಅಂತಹ ಹಕ್ಕು ಸಮಾನತೆ ಮತ್ತು ನ್ಯಾಯಯುತ ವಿಚಾರಣೆಯ ಸಾಂವಿಧಾನಿಕ ತತ್ವಗಳನ್ನು ಅತಿಕ್ರಮಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಪಿ.ವಿ. ಕುನ್ಹಿಕೃಷ್ಣನ್ ಪೀಠ ಅಭಿಪ್ರಾಯಪಟ್ಟಿದೆ.
ವಿವಾಹ ನೋಂದಣಿಯು ಕಾನೂನು ಬದ್ಧ ಅವಶ್ಯಕತೆಯಾಗಿದೆ. 2008ರ ನಿಯಮಗಳ ಅಡಿಯಲ್ಲಿ ಕಾರ್ಯವಿಧಾನದ ನ್ಯಾಯಸಮ್ಮತತೆಯ ಪ್ರಕಾರ, ಮೊದಲ ಪತ್ನಿಯ ವಿವಾಹವು ಮುಂದುವರಿದರೆ, ಆಕೆಯ ಪತಿಯ ಎರಡನೇ ವಿವಾಹದ ನೋಂದಣಿಗೂ ಮೊದಲು ನೋಟಿಸ್ ನೀಡಬೇಕು ಎಂದು ಕೋರ್ಟ್ ಹೇಳಿದೆ.

ವಿವಾಹಿತ ಮುಸ್ಲಿಂ ವ್ಯಕ್ತಿಯು 2008ರ ನಿಯಮಗಳ ಪ್ರಕಾರ, ಮದುವೆಯನ್ನು ನೋಂದಾಯಿಸಲು ಬಯಸಿದ್ರೆ ಸಾಂವಿಧಾನಿಕ ಆದೇಶಗಳನ್ನು ಗೌರವಿಸಬೇಕು. ಮುಸ್ಲಿಂ ಪುರುಷನು ತನ್ನ ಮೊದಲ ಹೆಂಡತಿಯೊಂದಿಗೆ ವೈವಾಹಿಕ ಸಂಬಂಧವು ಅಸ್ತಿತ್ವದಲ್ಲಿದ್ದಾಗ, ಮೊದಲ ಹೆಂಡತಿಗೆ ಸೂಚನೆ ನೀಡದೆ ಎರಡನೇ ಮದುವೆಯನ್ನು ನೋಂದಾಯಿಸಲು ಮೊದಲ ಹೆಂಡತಿಗೆ ಒತ್ತಡ ಹಾಕುವಂತಿಲ್ಲ ಎಂದಿದೆ.
ಮೊದಲ ಪತ್ನಿ ಎರಡನೇ ವಿವಾಹವನ್ನು ಅಮಾನ್ಯ ಎಂದು ಆರೋಪಿಸಿ ನೋಂದಣಿ ಮಾಡಿಸಲು ಆಕ್ಷೇಪ ವ್ಯಕ್ತಪಡಿಸಿದರೆ ರಿಜಿಸ್ಟ್ರಾರ್ ತಮ್ಮ ಪ್ರಕ್ರಿಯೆಯನ್ನು ಮುಂದುವರೆಸುವಂತಿಲ್ಲ. ರಿಜಿಸ್ಟ್ರಾರ್ ಕಕ್ಷಿದಾರರ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಎರಡನೇ ಮದುವೆಗೆ ನೋಂದಣಿ ಪ್ರಕ್ರಿಯೆಯನ್ನು ತಡೆಯಬೇಕು. ಅದರ ಸಿಂಧುತ್ವವನ್ನು ಸ್ಥಾಪಿಸಲು ಸಿವಿಲ್ ನ್ಯಾಯಾಲಯಕ್ಕೆ ಉಲ್ಲೇಖಿಸಬೇಕು.