ಬಂಗುಡೆ(mackerel) ಹಾಗೂ ಬೂತಾಯಿ(sardine) ಎಂದರೆ ಎಲ್ಲರಿಗೂ ಅಚ್ಚುಮೆಚ್ಚು! ಇವೆರಡು ಮೀನುಗಳಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚು. ವಿಶೇಷವಾಗಿ ಡೀಪ್ ಫ್ರೈ ಮಾಡಿದರೆ ಅಥವಾ ಹೆಚ್ಚು ಪ್ರಮಾಣದಲ್ಲಿ ತಿಂದರೆ ಆಮ್ಲೀಯತೆ, ಅನಿಲ ಅಥವಾ ಅಜೀರ್ಣ ಉಂಟಾಗಬಹುದು. ಇದಕ್ಕಾಗಿಯೇ ಕೆಲವು ಜನರು ಇದನ್ನು “ಗ್ಯಾಸ್ ಫಿಶ್” ಎಂದು ಕರೆಯುತ್ತಾರೆ. ಆದರೆ ವಾಸ್ತವದಲ್ಲಿ, ಸರಿಯಾದ ರೀತಿಯಲ್ಲಿ ಬೇಯಿಸಿದರೆ ಮ್ಯಾಕೆರೆಲ್ ಯಾವ ರೀತಿಯ ತೊಂದರೆಯೂ ನೀಡುವುದಿಲ್ಲ.

ಮೀನನ್ನು ಬೇಯಿಸುವಾಗ ಶುಂಠಿ, ಮೆಣಸು ಮತ್ತು ನಿಂಬೆ ರಸ ಸೇರಿಸಿದರೆ ಜೀರ್ಣಕ್ರಿಯೆ ಸುಲಭವಾಗುತ್ತದೆ ಮತ್ತು ಗ್ಯಾಸ್ ಸಮಸ್ಯೆ ತಪ್ಪುತ್ತದೆ.
ಮಕ್ಕಳಿಗೆ- ಗರ್ಭಿಣಿಯರು ತಿನ್ನಬಾರದು!
ಬಂಗುಡೆಯಲ್ಲಿ ಹೆಚ್ಚಿನ ಪ್ರಮಾಣದ ಪಾದರಸ (Mercury) ಇರುವ ಕಿಂಗ್ ಮ್ಯಾಕೆರೆಲ್ ಪ್ರಜಾತಿಗಳನ್ನು ಗರ್ಭಿಣಿಯರು ಮತ್ತು ಮಕ್ಕಳಿಗೆ ಶಿಫಾರಸು ಮಾಡಲಾಗುವುದಿಲ್ಲ. ಅದೇ ವೇಳೆ, ಕೆಲವರಿಗೆ ಬಂಗುಡೆ ತಿಂದ ಬಳಿಕ ಅಲರ್ಜಿ ಉಂಟಾಗುವುದು ಕಂಡುಬಂದಿದೆ. ಕೆಲವರಿ ಚರ್ಮದ ಉರಿ, ಉಬ್ಬು ಅಥವಾ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಆದರೆ ಅಟ್ಲಾಂಟಿಕ್ ಅಥವಾ ಪೆಸಿಫಿಕ್ ಬಂಗುಡೆ ಹೆಚ್ಚು ಸುರಕ್ಷಿತ ಆಯ್ಕೆ ಎಂದು ಪೌಷ್ಠಿಕ ತಜ್ಞರು ಹೇಳುತ್ತಾರೆ.

ಫ್ರೆಶ್ ಮೀನು ಕಂಡುಹಿಡಿಯುವುದು ಹೀಗಿ
ಬಂಗುಡೆಯ ತಾಜಾತನವನ್ನು ಗುರುತಿಸಲು ಅದರ ಚರ್ಮ ಹಾಗೂ ಅದರ ಕಣ್ಣಿನ ಹೊಳಪನ್ನು ಗಮನಿಸಬೇಕು. ತುಂಬಾ ಗಟ್ಟಿಯೂ ಆಗಿರದೆ, ತುಂಬಾ ಮೆದುವೂ ಆಗಿರದೆ, ಅದನ್ನು ಮುಟ್ಟುವಾಗ ಜಾರುವಂತಿರಬೇಕು. ಸಣ್ಣ ಪ್ರಮಾಣದಲ್ಲಿ ಸಾಗರದ ನೀರಿನ ವಾಸನೆ ಬರಬೇಕು. ಕೊಳೆತ ವಾಸನೆ ಬಂದರೆ, ಅಗತ್ಯಕ್ಕಿಂತ ಗಟ್ಟಿಯಾಗಿದ್ದರೆ, ಕಣ್ಣು ಅತಿಯಾದ ಕೆಂಪು ಬಣ್ಣದಿಂದ ಕೂಡಿದ್ದರೆ ಅದರ ಕಿವಿರು ಕಪ್ಪಾಗಿದ್ದು, ಮುಳ್ಳಿನ ಒಳಗಡೆ ಕಪ್ಪು ಬಣ್ಣವಿದ್ದರೆ ಆ ಮೀನು ಕೊಳೆತಿದೆ ಎಂದರ್ಥ. ಖರೀದಿಸಿದ ತಕ್ಷಣ ಫ್ರೀಜ್ ಮಾಡುವುದು ಉತ್ತಮ.
ಡಬ್ಬಿಯಲ್ಲಿನ ಮ್ಯಾಕೆರೆಲ್ ತಿನ್ನುವವರು ಕಡಿಮೆ ಸೋಡಿಯಂ ಇರುವ ಬ್ರ್ಯಾಂಡ್‌ಗಳನ್ನು ಆರಿಸಬೇಕು.
ಬಂಗುಡೆ ತವಾ ಫ್ರೈ ಹೀಗೆ ಮಾಡಿದ್ರೆ ಆರೋಗ್ಯಕರ

ಪದಾರ್ಥಗಳು: ಬಂಗುಡೆ, ಮೆಣಸಿನಪುಡಿ, ಅರಿಶಿನ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಈರುಳ್ಳಿ, ಕರಿಬೇವು, ಕೊತ್ತಂಬರಿ, ಪುದೀನಾ, ನಿಂಬೆ ರಸ, ಉಪ್ಪು, ಕಾರ್ನ್ ಫ್ಲವರ್. ಇಷ್ಟನ್ನೇ ಬಳಸಿದರೆ ಸಾಕು. ಅಂಗಡಿಯಲ್ಲಿ ಸಿಗುವ ಪುಡಿ ಬಳಸುವುದು ಸರಿಯಲ್ಲ. ಅದಲ್ಲಿ ರಾಸಾಯನಿಕಗಳಿರುವುದರಿಂದ ನಮ್ಮ ದೇಹಕ್ಕೆ ಹಾನಿ ಮಾಡಬಹುದು.
ವಿಧಾನ:
ಮೀನನ್ನು ಸ್ವಚ್ಛಗೊಳಿಸಿ, ಮೇಲಿನ ಪದಾರ್ಥಗಳನ್ನು ಮಿಕ್ಸರ್‌ನಲ್ಲಿ ಪೇಸ್ಟ್ ಮಾಡಿ ಮೀನಿಗೆ ಹಚ್ಚಿ 30 ನಿಮಿಷ ಮ್ಯಾರಿನೇಟ್ ಮಾಡಿ. ನಂತರ ತೆಂಗಿನ ಎಣ್ಣೆಯಲ್ಲಿ ನಿಧಾನವಾಗಿ ತಿರುಗಿಸುತ್ತಾ ಹುರಿಯಿರಿ. ಶುದ್ಧ ತೆಂಗಿನ ಎಣ್ಣೆ ಅಥವಾ ಗಾಣದ ಎಣ್ಣೆ ಬಳಸಿದರೆ ಆರೋಗ್ಯಕ್ಕೂ ಉತ್ತಮ, ಗ್ಯಾಸ್ಟ್ರಿಕಿಗೂ ಉತ್ತಮ.

ಗ್ಯಾಸ್ ಫಿಶ್ ಅಲ್ಲ
ಮುಖ್ಯವಾಗಿ ಬಂಗುಡೆ ಗ್ಯಾಸ್ ಫಿಶ್ ಅಲ್ಲವೇ ಅಲ್ಲ. ಸರಿಯಾದ ವಿಧಾನದಲ್ಲಿ ಬೇಯಿಸಿದರೆ ಇದು ಪೌಷ್ಟಿಕ, ರುಚಿಕರ ಮತ್ತು ಹೃದಯಕ್ಕೆ ಹಿತಕರವಾದ ಮೀನು. ಆದ್ದರಿಂದ, ಮಿತವಾಗಿ, ಸರಿಯಾಗಿ ಬೇಯಿಸಿದ ಬಂಗಡೆ ನಿಮ್ಮ ಆರೋಗ್ಯದ ಹಿತಚಿಂತಕ!
