ಮಂಗಳೂರು: ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಸಂಸ್ಥೆ ನಾಲ್ಕನೇ ಸತತ ವರ್ಷಕ್ಕೂ “ಶ್ರೇಷ್ಠ ಸಂಶೋಧನಾ ನವೀನತೆ (ಆರ್ & ಡಿ) ಪ್ರಶಸ್ತಿ”ಗೆ(Best Refining Innovation (R&D) Award at ETM 2025) ಪಾತ್ರವಾಗಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಈ ಮಿನಿರತ್ನ ಸಂಸ್ಥೆಗೆ ಈ ಪ್ರಶಸ್ತಿಯನ್ನು ಹೈದರಾಬಾದ್‌ನಲ್ಲಿ ನಡೆದ 28ನೇ ಎನರ್ಜಿ ಟೆಕ್ನಾಲಜಿ ಮೀಟ್ (ETM 2025) ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಯಿತು.

ಈ ಬಾರಿ ಪ್ರಶಸ್ತಿಯನ್ನು ಎಂಆರ್‌ಪಿಎಲ್‌ನ “ಗ್ರಾಜುಯಲ್ ಓಲೆಫಿನ್ಸ್ ಅಂಡ್ ಅರೋಮ್ಯಾಟಿಕ್ ಟೆಕ್ನಾಲಜಿ (GOAT)” ಎಂಬ ಕ್ರಾಂತಿಕಾರಿ ಸಂಶೋಧನೆಗೆ ನೀಡಲಾಗಿದೆ. ಇದು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ವಿಶಿಷ್ಟ ಕ್ರೂಡ್ ಟು ಕೆಮಿಕಲ್ಸ್ (Crude-to-Chemicals) ತಂತ್ರಜ್ಞಾನವಾಗಿದ್ದು, ಕಚ್ಚಾ ತೈಲವನ್ನು ನೇರವಾಗಿ ಉನ್ನತ ಮೌಲ್ಯದ ಪೆಟ್ರೋಕೆಮಿಕಲ್‌ಗಳಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿದೆ. ಈ ತಂತ್ರಜ್ಞಾನವು ಇಂಧನ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದರ ಜೊತೆಗೆ ಕಾರ್ಬನ್ ಉತ್ಸರ್ಗವನ್ನು ಕಡಿಮೆ ಮಾಡುವಲ್ಲಿ ಸಹ ಮಹತ್ವದ ಪಾತ್ರ ವಹಿಸುತ್ತದೆ.
ಪ್ರಶಸ್ತಿಯನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಪ್ರಧಾನ ಮಾಡಿದರು. ಅವರೊಂದಿಗೆ ಸಚಿವಾಲಯದ ಕಾರ್ಯದರ್ಶಿ ಪಂಕಜ್ ಜೈನ್ ಉಪಸ್ಥಿತರಿದ್ದರು. ಎಂಆರ್‌ಪಿಎಲ್‌ನ ಪರವಾಗಿ ನಿರ್ದೇಶಕ (ರಿಫೈನರಿ) ನಂದಕುಮಾರ್ ವಿ. ಪಿಳ್ಳೈ ಹಾಗೂ ಇನೋವೇಶನ್ ಸೆಂಟರ್‌ನ ಮುಖ್ಯ ವ್ಯವಸ್ಥಾಪಕರು ಕಾರ್ತಿಕ್ ಆರ್ ಮತ್ತು ಎನ್. ನಿರ್ಮಲ್ ಗಣೇಶ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ನಂದಕುಮಾರ್ ವಿ. ಪಿಳ್ಳೈ ಮಾತನಾಡಿ, “ಎಂಆರ್‌ಪಿಎಲ್ ಯಾವಾಗಲೂ ತಂತ್ರಜ್ಞಾನಗಳಲ್ಲಿ ಮುಂಚೂಣಿಯಲ್ಲಿದೆ. ನಮ್ಮ ಇನೋವೇಶನ್ ಸೆಂಟರ್ ಅಭಿವೃದ್ಧಿಪಡಿಸಿದ GOAT ತಂತ್ರಜ್ಞಾನವು ಭವಿಷ್ಯದ ಕ್ರೂಡ್-ಟು-ಕೆಮಿಕಲ್ಸ್ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯವನ್ನು ದೃಢಪಡಿಸಿದೆ. ನಾಲ್ಕನೇ ಬಾರಿಗೆ ಈ ಪ್ರಶಸ್ತಿ ಸಿಕ್ಕಿರುವುದು ನಮ್ಮ ತಂಡದ ಪರಿಶ್ರಮ ಮತ್ತು ನಿಷ್ಠೆಯ ಸಾಕ್ಷಿ.” ಎಂದು ಹೇಳಿದರು.
ಎನರ್ಜಿ ಟೆಕ್ನಾಲಜಿ ಮೀಟ್ 2025 “ಹಸಿರು ಇಂಧನದ ಹಾದಿಯಲ್ಲಿ ಶಾಶ್ವತ ಶೋಧನೆ ಮತ್ತು ನವೀನತೆ” ಎಂಬ ವಿಷಯದಡಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ದೇಶ-ವಿದೇಶದ ತೈಲ ಶೋಧನಾ ತಜ್ಞರು, ಪೆಟ್ರೋಕೆಮಿಕಲ್ ತಂತ್ರಜ್ಞಾನ ಸಂಸ್ಥೆಗಳು ಮತ್ತು ಇಂಧನ ಕ್ಷೇತ್ರದ ನಾಯಕರನ್ನು ಒಂದೇ ವೇದಿಕೆಯಲ್ಲಿ ತರಲಾಗಿತ್ತು ಎಂದು ಮುಖ್ಯ ಪ್ರಧಾನ ವ್ಯವಸ್ಥಾಪಕ (ಕಾಂಪೊರೇಟ್ ಬ್ರಾಂಡಿಂಗ್ ಮತ್ತು ಸಂವಹನ) ಡಾ. ರೂಡಾಲ್ಫ್ ವಿ.ಜೆ. ನೊರೊನ್ಹಾ ಮಾಹಿತಿ ನೀಡಿದ್ದಾರೆ.

