ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಮದುವೆಯ ವಾಹನವೊಂದು ಬಿಸಿಲೆ ಘಾಟ್ ರಸ್ತೆಯ ತಿರುವಿನಲ್ಲಿ ಪಲ್ಟಿಯಾಗಿ ವಾಹನದಲ್ಲಿದ್ದ 20ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಇಂದು (ಅ.30) ಸಂಭವಿಸಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯದಲ್ಲಿ ಕೂಡುರಸ್ತೆ ವನಗೂರುನ ಯುವಕ ಹಾಗೂ ಏನೆಕಲ್ಲಿನ ವಧುವಿನೊಂದಿಗೆ ಇಂದು ಮದುವೆ ಕಾರ್ಯಕ್ರಮ ನಡೆಯಬೇಕಿತ್ತು. ವಧು – ವರ ಇಬ್ಬರೂ ನಿನ್ನೆಯೇ ಹಾಲ್‌ಗೆ ಬಂದಿದ್ದರು. ಹುಡುಗನ ಕಡೆಯವರು ಇಂದು ಟೆಂಪೋ ವಾಹನದಲ್ಲಿ ಬರುತ್ತಿದ್ದ ವೇಳೆ ಬಿಸ್ಲೆ ತಿರುವಿನಲ್ಲಿ ವಾಹನ ಇಪ್ಪತ್ತಕ್ಕೂ ಅಧಿಕ ಅಡಿ ಆಳಕ್ಕೆ ಪಲ್ಟಿಯಾಗಿ ಬಿದ್ದಿದೆ. ಟೆಂಪೋದಲ್ಲಿದ್ದ ಇಪ್ಪಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಹಲವರಿಗೆ ಗಂಭೀರ ಗಾಯಗಳಾಗಿದೆ.

ಗಾಯಾಳುಗಳನ್ನು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಆರು ಆಂಬ್ಯುಲೆನ್ಸ್ ಗಳಲ್ಲಿ ಮಂಗಳೂರಿಗೆ ಕರೆದೊಯ್ಯಲಾಗುತ್ತಿದೆ ಎಂದು ತಿಳಿದು ಬಂದಿದೆ. ಸ್ಥಳೀಯರು ಕಾರ್ಯಾಚರಣೆಗೆ ಸಹಕಾರ ನೀಡಿದ್ದಾರೆ.
