ಮಂಗಳೂರು: ದಂತವೈದ್ಯ, ಪ್ರೊಫೆಸರ್ ಆಗಿರುವ ಉತ್ತರ ಶಾಸಕ ಭರತ್ ಶೆಟ್ಟಿ ಸ್ಪೀಕರ್ ಯು.ಟಿ. ಖಾದರ್ ವಿರುದ್ಧ ಬಹಳ ಕ್ಷುಲ್ಲಕವಾಗಿ ಮಾತಾಡಿದ್ದಾರೆ. 5 ಬಾರಿ ಕ್ಷೇತ್ರದಿಂದ ಆಯ್ಕೆಯಾಗಿರುವ, ವಿವಿಧ ಸಚಿವಗಿರಿಯನ್ನು ಸಮರ್ಥವಾಗಿ ನಿಭಾಯಿಸಿರುವ ಯು.ಟಿ.ಖಾದರ್ ಇಡೀ ರಾಜ್ಯದಲ್ಲೇ ಹೆಸರು ಪಡೆದಿದ್ದಾರೆ. ಭ್ರಷ್ಟಾಚಾರ ಮುಕ್ತವಾಗಿ ಪ್ರತಿಪಕ್ಷಗಳ ಮಿತ್ರರಾಗಿ ಎಲ್ಲರೊಂದಿಗೆ ಸ್ನೇಹದಿಂದ ಇರುವ ಖಾದರ್ ಬಗ್ಗೆ ಭರತ್ ಶೆಟ್ಟಿ ಆಡಿರುವ ಮಾತು ಶಾಸಕ ಸ್ಥಾನಕ್ಕೆ ತಕ್ಕುದಲ್ಲ ಮಾತ್ರವಲ್ಲದೆ ಇಡೀ ಜಿಲ್ಲೆಗೆ ಕಳಂಕವಾದುದು ಎಂದು ಕೆಪಿಸಿಸಿ ವಕ್ತಾರ ಎ.ಸಿ. ವಿನಯ್‌ರಾಜ್ ತಿರುಗೇಟು ನೀಡಿದ್ದಾರೆ.

ಭರತ್ ಶೆಟ್ಟಿ ಸ್ಪೀಕರ್ ಖಾದರ್ ವಿರುದ್ಧ ಭ್ರಷ್ಟಾಚಾರ ಆರೋಪದ ಕುರಿತಂತೆ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಶಾಸಕರಾಗಿ ನಿಮ್ಮ ನಾಲಗೆ ಹಿಡಿತದಲ್ಲಿ ಇಟ್ಟುಕೊಳ್ಳಿ ಎಂದು ಈ ಹಿಂದೆ ಇದೇ ಶಾಸಕರಿಗೆ ರಾಜ್ಯ ಉಚ್ಛ ನ್ಯಾಯಾಲಯ ಹೇಳಿತ್ತು. ಈ ಹಿಂದೆ ತಮ್ಮ ವರ್ತನೆಯಿಂದ ವಿಧಾನಸಭೆಯಿಂದ ಅಮಾನತು ಕೂಡ ಆಗಿದ್ದರು. ಹೀಗಾಗಿ ಕೇವಲ ಪ್ರಚಾರ ಪಡೆಯುವ ಉದ್ದೇಶದಿಂದ ಇಂತಹ ಮಾತನ್ನು ಆಡುತ್ತಿದ್ದಾರೆ. ಇದರಿಂದ ಜಿಲ್ಲೆಯ ಜನರ ಘನತೆಗೂ ಕುಂದುಂಟಾಗಿದೆ. ಶಾಸಕರು ವಿಧಾನಸಭಾ ಕಲಾಪದಲ್ಲಿ ಸರಿಯಾಗಿ ಭಾಗವಹಿಸಬೇಕು ಸಮಯ ಹಾಳು ಮಾಡಬಾರದು ಎಂದು ಎಲ್ಲ ವ್ಯವಸ್ಥೆ ಕಲ್ಪಿಸಿದ್ದಾರೆ. ವಿಶ್ರಾಂತಿ, ಊಟದ ವ್ಯವಸ್ಥೆಯನ್ನು ಆಗಲೇ ಯಾಕೆ ವಿರೋಧಿಸಲಿಲ್ಲ? ಆಗ ಎಂಜಾಯ್ ಮಾಡಿ ಈಗ್ಯಾಕೆ ವಿರೋಧಿಸುತ್ತಿದ್ದೀರಿ? ಎಂದು ವ್ಯಂಗ್ಯವಾಡಿದರು.

ಸರಕಾರದ ಹಣ ಈ ರೀತಿ ಪೋಲು ಮಾಡಿದ್ದಾರೆ ಎಂದು ಹೇಳುವ ನೀವು ಕೋವಿಡ್ ಸಮಯದಲ್ಲಿ ನಿಮ್ಮದೇ ಸರಕಾರ ಆಡಳಿತದಲ್ಲಿ ಇದ್ದಾಗ ವಿವಿಧ ಆರೋಗ್ಯ ಉಪಕರಣಗಳನ್ನು ಖರೀದಿಯ ಹೆಸರಲ್ಲಿ ರೂ. 7200 ಕೋಟಿ ರೂ. ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಜಸ್ಟೀಸ್ ಜಾನ್ ಮೈಕೆಲ್ ಡಿಕುನ್ಹ ವರದಿ ಸರಕಾರಕ್ಕೆ ಸಲ್ಲಿಸಿದೆ. ಆಗ ನೀವೇ ಶಾಸಕರಾಗಿದ್ದಿರಿ. ನಿಮ್ಮದೇ ಸರಕಾರ ಮಂತ್ರಿಗಳು ಈ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದು ನಿಮಗೆ ತಿಳಿದೇ ಇದೆ. ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ನಡೆದಿದ್ದರೂ ನೀವ್ಯಾಕೆ ಮಾತಾಡಿಲ್ಲ? ಇದಕ್ಕೆ ನೀವು ಈಗಲಾದರೂ ಉತ್ತರ ಕೊಡಬೇಕಿದೆ. ಇದು ನಮ್ಮ ನೇರ ಪ್ರಶ್ನೆಯಾಗಿದೆ ಎಂದು ಸವಾಲು ಹಾಕಿದರು.


ಅಭಿವೃದ್ಧಿಯಾಗುವಾಗ ಬದಲಾವಣೆ ಮಾಡುವುದು ಅನಿವಾರ್ಯ. ಹಳೆಯ ಸೋಫಾ ಚೇರ್ ಬದಲಾಯಿಸಿದ್ದಾರೆ. ನಿಮಗೆ ಸಂದೇಹವಿದ್ದರೆ ನೀವು ಆರ್ಥಿಕ ಇಲಾಖೆಯಲ್ಲಿ ಕೇಳಿಕೊಳ್ಳಿ. ನಿಮ್ಮ ಕ್ಷೇತ್ರದಲ್ಲಿ ಇಂಡಸ್ಟ್ರಿಯಲ್ ಎಸ್ಟೇಟ್, ಬೀಚ್ ಟೂರಿಸಂ ಎಲ್ಲವೂ ಇದೆ. ನೀವು ಏನು ಪ್ರಗತಿ ಸಾಧಿಸಿದ್ದೀರಿ? ಪ್ರವಾಸೋದ್ಯಮಕ್ಕೆ ನೀವು ನೀಡಿದ ಕೊಡುಗೆ ಏನು? ಎಷ್ಟು ಮಂದಿ ಯುವಕರಿಗೆ ಉದ್ಯೋಗ ಕಲ್ಪಿಸಿದ್ದೀರಿ? ನಿಮಗೆ ಅರ್ಧಕ್ಕೆ ನಿಂತ ಸುರತ್ಕಲ್ ಮಾರುಕಟ್ಟೆಯನ್ನು ಪೂರ್ತಿಗೊಳಿಸುವ ಯೋಗ್ಯತೆ ಇಲ್ಲ. ಸಮಯಕ್ಕೆ ಸರಿಯಾಗಿ ಪೂರ್ತಿಯಾಗಿದ್ದರೆ ಇಂದು 70 ಕೋಟಿಗೆ ಆಗಬೇಕಿದ್ದ ಮಾರುಕಟ್ಟೆ ಪೂರ್ತಿಗೊಳಿಸಲು 140 ಕೋಟಿ ಬೇಕಾಗಿರಲಿಲ್ಲ ಇದಕ್ಕೆ ನಿಮ್ಮ ಬೇಜವಾಬ್ದಾರಿ ಕಾರಣವಲ್ಲವೇ? ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಅಪ್ಪಿ, ಚಂದ್ರಕಲಾ, ರೂಪಾ ಚೇತನ್, ಅನಿಲ್ ಕುಮಾರ್, ಚಿತ್ತರಂಜನ್ ಶೆಟ್ಟಿ, ಪ್ರಕಾಶ್ ಸಾಲಿಯಾನ್, ನವಾಝ್ ಉಪಸ್ಥಿತರಿದ್ದರು.