ಬಜಪೆ ಕಳವಾರು ಶ್ರೀ ಬೆಂಕಿನಾಥೇಶ್ವರ ದೇವಸ್ಥಾನದಲ್ಲಿ ಮಾರ್ಚ್ 20ರಿಂದ ಅಷ್ಟಬಂಧ ಬ್ರಹ್ಮಕಲಶೋತ್ಸವ

ಮಂಗಳೂರು: ಮಂಗಳೂರು ತಾಲೂಕಿನ ಬಜಪೆ ಸಮೀಪದ ಬಾಳ-ಕಳುವಾರು ಗ್ರಾಮದ ಐತಿಹಾಸಿಕ ಶ್ರೀ ಬೆಂಕಿನಾಥೇಶ್ವರ ದೇವಸ್ಥಾನದಲ್ಲಿ ಮಾರ್ಚ್ 20ರಿಂದ 29ರ ವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಕೆ. ಚಿತ್ತರಂಜನ್ ಶೆಟ್ಟಿ ಕಳವಾರುಗುತ್ತು ಅವರು ತಿಳಿಸಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ಕರೆದು ಮಾತಾಡಿದ ಅವರು, ಸುಮಾರು 1200 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಈ ಪವಿತ್ರ ಕ್ಷೇತ್ರವು ಆಗಮ ಶಾಸ್ತ್ರದಂತೆ ಪುನರ್ ನಿರ್ಮಾಣಗೊಂಡು ಸಜ್ಜಾಗಿದೆ. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಸ್ಥಳೀಯ ಶಾಸಕರು, ಸಂಸದರು ಹಾಗೂ ಭಕ್ತಾದಿಗಳ ಸಹಕಾರದೊಂದಿಗೆ ಸುಮಾರು 2.5 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಯೋಜನೆಗಳಿಗೆ ಎಂ.ಆರ್.ಪಿ.ಎಲ್ (MRPL) ಸಂಸ್ಥೆಯು ಕೂಡ ಉದಾರ ಧನಸಹಾಯ ನೀಡಿದೆ. ಮಾರ್ಚ್ 20ರಂದು ಸಾಮುದಾಯಿಕ ಪ್ರಾರ್ಥನೆ ಹಾಗೂ ತೋರಣ ಮುಹೂರ್ತದೊಂದಿಗೆ ಉತ್ಸವದ ಕಾರ್ಯಕ್ರಮಗಳು ಆರಂಭವಾಗಲಿದ್ದು, ಪ್ರತಿದಿನ ಧಾರ್ಮಿಕ ವಿಧಿವಿಧಾನಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಬ್ರಹ್ಮಕಲಶೋತ್ಸವದ ಇತಿಹಾಸ:
ಪ್ರಕೃತಿಯ ಬದಲಾವಣೆಯ ನಿಯಮದಂತೆ ಪ್ರತಿ 12 ವರ್ಷಗಳಿಗೊಮ್ಮೆ ಈ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಾ ಬಂದಿದೆ. ಈ ಹಿಂದೆ 1892, 1953, 1987, 2001 ಹಾಗೂ 2014ರಲ್ಲಿ ಬ್ರಹ್ಮಕಲಶೋತ್ಸವಗಳು ಶಾಸ್ತ್ರೋಕ್ತವಾಗಿ ನೆರವೇರಿದ್ದವು. ಇದೀಗ ಮಾರ್ಚ್ 27ರ ಶುಕ್ರವಾರ ಬೆಳಿಗ್ಗೆ 10:51ಕ್ಕೆ ಒದಗುವ ವೃಷಭ ಲಗ್ನದ ಸುಮುಹೂರ್ತದಲ್ಲಿ ಬ್ರಹ್ಮಶ್ರೀ ಎಡಪದವು ರಾಧಾಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನೆರವೇರಲಿದೆ ಎಂದರು.

ಈ ಸುಸಂದರ್ಭದಲ್ಲಿ ಕ್ಷೇತ್ರದ ಇತಿಹಾಸ ಹಾಗೂ ಧಾರ್ಮಿಕ ಲೇಖನಗಳನ್ನು ಒಳಗೊಂಡ ‘ಶಿವಸ್ಮೃತಿ’ ಎಂಬ ವಿಶೇಷ ಸ್ಮರಣ ಸಂಚಿಕೆಯನ್ನು ಹೊರತರಲು ನಿರ್ಧರಿಸಲಾಗಿದೆ. ಭಕ್ತರು ಮತ್ತು ಉದ್ಯಮಿಗಳು ತಮ್ಮ ಸಂಸ್ಥೆಗಳ ಜಾಹೀರಾತುಗಳನ್ನು ನೀಡುವ ಮೂಲಕ ಈ ಪುಣ್ಯ ಕಾರ್ಯಕ್ಕೆ ಸಹಕರಿಸಬೇಕೆಂದು ಸಮಿತಿ ವಿನಂತಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಜಗಜೀವನ್ ಶೆಟ್ಟಿ (ಉಪಾಧ್ಯಕ್ಷರು), ಬಿ. ರವೀಂದ್ರ ರಾವ್ (ಪ್ರಧಾನ ಕಾರ್ಯದರ್ಶಿ), ಪದ್ಮನಾಭ ಬಿ. (ಸಂಚಾಲಕರು, ಧಾರ್ಮಿಕ ಸಭಾ ಕಾರ್ಯಕ್ರಮ), ಬಾಲ ಗಂಗಾಧರ ಪೂಜಾರಿ (ಸಂಚಾಲಕರು, ಸ್ಮರಣ ಸಂಚಿಕೆ), ಯತಿರಾಜ್ ಡಿ. ಸಾಲ್ಯಾನ್ ಮತ್ತು ಚೇತನ್ ಕುಮಾರ್ ಜೋಗಿ (ವಾರ್ತಾ ಮತ್ತು ಪ್ರಚಾರ ವಿಭಾಗ) ಉಪಸ್ಥಿತರಿದ್ದರು.

error: Content is protected !!