ಟ್ರೆಹ್ರಾನ್: ಇರಾನ್ ಮತ್ತು ಇಸ್ರೇಲ್ ನಡುವಿನ ಸಮರ ತುತ್ತತುದಿಗೆ ತಲುಪಿರುವ ಬೆನ್ನಲ್ಲೇ, ಇರಾನ್‌ನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರಾದ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಅಲಿ ಲಾರಿಜಾನಿ ಇಸ್ರೇಲ್ ನಡೆಸಿದ ಭೀಕರ ವೈಮಾನಿಕ ದಾಳಿಗೆ ಬಲಿಯಾಗಿದ್ದಾರೆ ಎಂಬ ಸ್ಫೋಟಕ ಸುದ್ದಿ ಜಗತ್ತನ್ನೇ ನಡುಗಿಸಿದೆ. ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಈ ಹತ್ಯೆಯನ್ನು ಖಚಿತಪಡಿಸಿದ್ದು, ಲಾರಿಜಾನಿ ಅಂತ್ಯವಾಗಿದೆ ಎಂದು ಘೋಷಿಸಿದ್ದಾರೆ.

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಾಮಿನೇಯ್ ಯುದ್ಧದ ಮೊದಲ ದಿನವೇ ನಿಧನರಾದ ಬೆನ್ನಲ್ಲೇ, ಅವರ ಅತ್ಯಾಪ್ತ ಒಡನಾಡಿಯಾಗಿದ್ದ ಲಾರಿಜಾನಿ ಸಾವು ಇರಾನ್ ಪಾಲಿಗೆ ಚೇತರಿಸಿಕೊಳ್ಳಲಾಗದ ದೊಡ್ಡ ಹೊಡೆತವಾಗಿದೆ. ಒಂದು ವೇಳೆ ಈ ಸುದ್ದಿ ಅಧಿಕೃತವಾಗಿ ಸಾಬೀತಾದರೆ, ಖಾಮಿನೇಯ್ ನಂತರ ಇರಾನ್ ಕಳೆದುಕೊಂಡ ಅತ್ಯಂತ ಪ್ರಭಾವಿ ತಲೆ ಇದಾಗಲಿದೆ.

ಇಸ್ರೇಲ್ ಇಷ್ಟೊಂದು ಆತ್ಮವಿಶ್ವಾಸದಿಂದ ಲಾರಿಜಾನಿ ಹತರಾಗಿದ್ದಾರೆ ಎಂದು ಹೇಳುತ್ತಿದ್ದರೂ, ಇರಾನ್ ಮಾತ್ರ ಈ ಬಗ್ಗೆ ಇನ್ನೂ ತುಟಿ ಬಿಚ್ಚದೆ ನಿಗೂಢ ಮೌನ ತಾಳಿದೆ. ಕುತೂಹಲದ ಸಂಗತಿಯೆಂದರೆ, ಇರಾನ್‌ನ ಸರ್ಕಾರಿ ಮಾಧ್ಯಮ ʻಪ್ರೆಸ್ ಟಿವಿ’ ಮಂಗಳವಾರವಷ್ಟೇ ಲಾರಿಜಾನಿ ಅವರದ್ದೆನ್ನಲಾದ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಇರಾನ್‌ನಲ್ಲಿ ನಡೆಯುತ್ತಿರುವ ಆಕ್ರೋಶದ ಪ್ರತಿಭಟನೆಗಳನ್ನು ಟ್ರಂಪ್ ʻಎಐ’ (Artificial Intelligence) ಸೃಷ್ಟಿ ಎಂದು ಕರೆದಿರುವುದನ್ನು ಲೇವಡಿ ಮಾಡಿದ್ದಾರೆ. ಈ ಹೇಳಿಕೆಯು ಲಾರಿಜಾನಿ ಬದುಕಿದ್ದಾರೆ ಎಂದು ತೋರಿಸಲು ಇರಾನ್ ಮಾಡಿದ ತಂತ್ರವೇ ಅಥವಾ ಅವರ ಸಾವಿನ ಮುನ್ನ ರೆಕಾರ್ಡ್ ಆಗಿದ್ದೇ ಎಂಬುದು ಈಗ ಜಾಗತಿಕ ಮಟ್ಟದ ದೊಡ್ಡ ಚರ್ಚೆಯ ವಿಷಯವಾಗಿದೆ.

ಕೇವಲ ಲಾರಿಜಾನಿ ಮಾತ್ರವಲ್ಲದೆ, ಇರಾನ್‌ನ ʻಬಸಿಜ್ ರೆಸಿಸ್ಟೆನ್ಸ್ ಫೋರ್ಸ್’ ಮುಖ್ಯಸ್ಥ ಘೋಲಮ್ರೆಜಾ ಸುಲೈಮಾನಿ ಸೇರಿದಂತೆ ಹಲವು ಹಿರಿಯ ಕಮಾಂಡರ್‌ಗಳನ್ನು ಗುರಿಯಾಗಿಸಿ ಇಸ್ರೇಲ್ ಸರಣಿ ದಾಳಿಗಳನ್ನು ನಡೆಸಿದೆ. ವಿಶೇಷವೆಂದರೆ, ಅಮೆರಿಕವು ಲಾರಿಜಾನಿ ಸೇರಿದಂತೆ ಹತ್ತು ಹಿರಿಯ ಅಧಿಕಾರಿಗಳ ಬಗ್ಗೆ ಮಾಹಿತಿ ನೀಡಿದವರಿಗೆ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದ ಬೆನ್ನಲ್ಲೇ ಈ ದಾಳಿ ಸಂಭವಿಸಿದೆ.

ಇತ್ತ ಯುದ್ಧದ ಕಾರ್ಮೋಡಗಳ ನಡುವೆಯೇ, ಇರಾನ್ ಸರ್ಕಾರವು ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತದ ವಶದಲ್ಲಿರುವ ತನ್ನ ಹಡಗುಗಳನ್ನು ಬಿಡುಗಡೆ ಮಾಡುವಂತೆ ಮಾತುಕತೆ ನಡೆಸುತ್ತಿದೆ. ಈ ಎಲ್ಲಾ ಬೆಳವಣಿಗೆಗಳು ಮಧ್ಯಪ್ರಾಚ್ಯದಲ್ಲಿ ಇರಾನ್‌ನ ಪಾರುಪತ್ಯ ಅಂತ್ಯವಾಗುತ್ತಿದೆಯೇ ಎಂಬ ಅನುಮಾನವನ್ನು ದಟ್ಟವಾಗಿಸಿವೆ.