ಕಾರ್ಕಳ: ಪಳ್ಳಿ ಫ್ರೆಂಡ್ಸ್ (ರಿ.) ಪಳ್ಳಿ ಸಂಸ್ಥೆಯ ದಶಮಾನೋತ್ಸವ ಸಂಭ್ರಮದ ಅಂಗವಾಗಿ, ಸಂಸ್ಥೆಯ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ಮತ್ತೊಂದು ಹೆಜ್ಜೆಯಾಗಿ ಸುಸಜ್ಜಿತ ತುರ್ತು ವಾಹನ (Ambulance) ಮತ್ತು ಶವ ಸಂರಕ್ಷಿತ ಶೀತ ಘಟಕ (Dead Body Freezer) ಲೋಕಾರ್ಪಣೆ ಸಮಾರಂಭ ನವೆಂಬರ್ 2ರಂದು ಭಾನುವಾರ ಸಂಜೆ 4 ಗಂಟೆಗೆ ಪಳ್ಳಿಯ ಕೃಷ್ಣ ಸಭಾಭವನ ವಠಾರದಲ್ಲಿ ಭವ್ಯವಾಗಿ ನಡೆಯಲಿದೆ.

ಕಟೀಲು ಕ್ಷೇತ್ರದ ಶ್ರೀ ದುರ್ಗಾಪರಮೇಶ್ವರಿ ಸಾನಿಧ್ಯದಲ್ಲಿ ʻಅಮ್ಮನೆಡೆಗೆ ನಮ್ಮ ನಡೆʼ ಎಂಬ ಧ್ಯೇಯದೊಂದಿಗೆ ಆರಂಭವಾದ ಪಳ್ಳಿ ಫ್ರೆಂಡ್ಸ್ ಸಂಸ್ಥೆ ಇಂದು 10 ವರ್ಷಗಳ ಸಾರ್ಥಕ ಸೇವಾ ಪಥದಲ್ಲಿದೆ. ಈ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಏರ್ಪಡಿಸಲಾಗಿದ್ದು, ಮಧ್ಯಾಹ್ನ 3.30ಕ್ಕೆ “ಭಕ್ತಿಗಾಯನ” ಶ್ರೀ ಯೋಗೀಶ್ ಕಿಣಿ, ಕಾರ್ಕಳ ಬಾಳಗದಿಂದ ನಡೆಯಲಿದ್ದು, ಸಂಜೆ 6 ಗಂಟೆಯಿಂದ ನೃತ್ಯಸಿಂಚನ ಹಾಗೂ ನೃತ್ಯರೂಪಕ “ನಾರಸಿಂಹ” (ಒಳಿತಿನ ವಿಜಯದ ಕಥನ) ಉಡುಪಿ ನೃತ್ಯನಿಕೇತನ ಕೊಡವೂರು ಕಲಾವಿದರಿಂದ ಪ್ರದರ್ಶನಗೊಳ್ಳಲಿದೆ.

ಸಭಾ ಕಾರ್ಯಕ್ರಮ ಸಂಜೆ 4.30ಕ್ಕೆ ಜರುಗಲಿದ್ದು, ನಿಂಜೂರು ಮಾಳಿಗೆ ಮನೆ ಸುರೇಂದ್ರ ಹೆಗ್ಡೆ ಅವರಿಂದ ಆಂಬುಲೆನ್ಸ್ ಲೋಕಾರ್ಪಣೆ ನೆರವೇರಲಿದೆ. ಆಶೀರ್ವಚನವನ್ನು ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನೀಡಲಿದ್ದು, ಸಭಾಧ್ಯಕ್ಷತೆ ಕಾರ್ಕಳ ಶಾಸಕರಾದ ವಿ. ಸುನೀಲ್ ಕುಮಾರ್ ವಹಿಸಲಿದ್ದಾರೆ. ಫ್ರೀಜರ್ ಘಟಕವನ್ನು ಶ್ರೀ ಮಹಾಲಿಂಗೇಶ್ವರ ದೇವಾಲಯದ ಆಡಳಿತ ಮೊಕ್ತಸರರಾದ ಜಗದೀಶ್ ಹೆಗ್ಡೆ ಲೋಕಾರ್ಪಣೆ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಡಾ. ಬಸವರಾಜ್ ಹುಬ್ಬಳ್ಳಿ (ಡಿ.ಎಚ್.ಒ., ಉಡುಪಿ), ಹರಿರಾಮ್ ಶಂಕರ್ ಐ.ಪಿ.ಎಸ್. (ಪೊಲೀಸ್ ಅಧೀಕ್ಷಕರು, ಉಡುಪಿ), ಡಾ. ಪದ್ಮರಾಜ್ ಹೆಗ್ಡೆ (ಯೂರೋಲಜಿ ತಜ್ಞರು, ಕೆಎಂಸಿ ಮಣಿಪಾಲ), ಡಾ. ಮಂಜುನಾಥ್ ಕೋಟ್ಯಾನ್ (ಪ್ರಾಂಶುಪಾಲರು, ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ), ಬಾಲಕೃಷ್ಣ ಪ್ರಭು (ಎಸ್ಟೇಟ್ ಆಫೀಸರ್, ಮಾಹೆ ಮಣಿಪಾಲ), ಪುಂಡಲೀಕ ನಾಯಕ್ (ಧರ್ಮದರ್ಶಿಗಳು, ಅಡಪಾಡಿ), ಪ್ರಸಾದ್ ಶೆಟ್ಟಿ ದೊಡ್ಡಮನೆ (ಉದ್ಯಮಿ) ಹಾಗೂ ಉಷಾ ಯು. ಅಂಚನ್ (ಅಧ್ಯಕ್ಷೆ, ಪಳ್ಳಿ ಗ್ರಾಮ ಪಂಚಾಯತ್) ಭಾಗವಹಿಸಲಿದ್ದಾರೆ.

ಕಾರ್ಯಕ್ರಮವನ್ನು ದಾಮೋದರ್ ಶರ್ಮ ಬಾರ್ಕೂರು ನಿರೂಪಿಸಲಿದ್ದು, ಸಂಸ್ಥೆಯ ಅಧ್ಯಕ್ಷ ಸತ್ಯಾನಂದ ಶೆಟ್ಟಿ, ಉಪಾಧ್ಯಕ್ಷ ಸಂದೀಪ್ ಬಂಗೇರ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಪ್ರಭು, ಕೋಶಾಧಿಕಾರಿ ಕಾಂತೇಶ್ ಶೆಟ್ಟಿ ಮತ್ತು ಗೌರವ ಸಲಹೆಗಾರರು ಸಹಿತ ಎಲ್ಲಾ ಸದಸ್ಯರು ಸಕ್ರಿಯ ಪಾತ್ರವಹಿಸಿದ್ದಾರೆ. ಸಮಾಜಮುಖಿ ಸೇವಾ ಮನೋಭಾವದಿಂದ ಪಳ್ಳಿ ಫ್ರೆಂಡ್ಸ್ ಸಂಸ್ಥೆಯು ಕಳೆದ ದಶಕದಲ್ಲಿ ನಾನಾ ಸಾಮಾಜಿಕ ಕ್ಷೇತ್ರಗಳಲ್ಲಿ ನೀಡಿರುವ ಕೊಡುಗೆಯನ್ನು ಈ ದಶಮಾನೋತ್ಸವ ಲೋಕಾರ್ಪಣಾ ಸಮಾರಂಭವು ಮತ್ತೊಮ್ಮೆ ಪ್ರತಿಬಿಂಬಿಸಲಿದೆ.

