
ಲಕ್ನೋ: ಬಿಜೆಪಿಯ ಮಾಜಿ ಶಾಸಕ ರಾಘವೇಂದ್ರ ಪ್ರತಾಪ್ ಸಿಂಗ್ ಅವರು “ಹಿಂದೂ ಯುವಕರು ಪ್ರತಿ ಇಬ್ಬರು ಹಿಂದೂ ಹುಡುಗಿಯರಿಗೆ ಬದಲಾಗಿ ಹತ್ತು ಮುಸ್ಲಿಂ ಯುವತಿಯರನ್ನು ಅಪಹರಿಸಿ ಮದುವೆಯಾಗಬೇಕು” ಎಂದು ಸಾರ್ವಜನಿಕ ಸಭೆಯಲ್ಲಿ ಕರೆ ನೀಡಿದ್ದು, ಈ ಕುರಿತು ವಿವಾದಾತ್ಮಕ ಚರ್ಚೆ ಉಂಟಾಗಿದೆ. ಮದುವೆ ವೆಚ್ಚ ಮತ್ತು ಉದ್ಯೋಗದ ಭರವಸೆ ನೀಡಿದ ಅವರ ಈ ಹೇಳಿಕೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಕಳೆದ ತಿಂಗಳು ದುಮಾರಿಯಾಗಂಜ್‌ನಲ್ಲಿ ಇಬ್ಬರು ಹಿಂದು ಯುವತಿಯರು ಇಸ್ಲಾಮ್‌ಗೆ ಮತಾಂತರಗೊಂಡಿದ್ದಾರೆ ಎಂದು ಹೇಳಿರುವ ಸಿಂಗ್, ‘ನಾವು ಇದನ್ನು ಅನುಮತಿಸಲು ಸಾಧ್ಯವಿಲ್ಲ, ಪ್ರತಿ ಇಬ್ಬರು ಹಿಂದೂ ಯುವತಿಯರಿಗೆ ಬದಲಾಗಿ ನಾವು ಹತ್ತು ಮುಸ್ಲಿಮ್ ಯುವತಿಯರನ್ನು ಬಯಸುತ್ತೇವೆ’ ಎಂದಿದ್ದಾರೆ.‘ಮುಸ್ಲಿಮರ ತುಷ್ಟೀಕರಣದಲ್ಲಿ ತೊಡಗಿಕೊಂಡಿದ್ದ ಸಮಾಜವಾದಿ ಪಕ್ಷದ ಸರಕಾರ ರಾಜ್ಯದಲ್ಲಿಲ್ಲ. ಈಗ ನಾವು ಯೋಗಿ ಆದಿತ್ಯನಾಥರ ಸರಕಾರವನ್ನು ಹೊಂದಿದ್ದೇವೆ. ಚಿಂತಿಸುವ ಅಗತ್ಯವಿಲ್ಲ’ ಎಂದೂ ಸಿಂಗ್ ಹೇಳಿರುವುದು ವೀಡಿಯೊದಲ್ಲಿ ಕೇಳಿಬಂದಿದೆ. ಕೋಮು ಸೌಹಾರ್ದವನ್ನು ಕಾಯ್ದುಕೊಳ್ಳುವುದು ಕೇವಲ ಹಿಂದುಗಳ ಜವಾಬ್ದಾರಿಯಲ್ಲ ಎಂದು ಹೇಳಿದ್ದಾರೆ.