ಸುಳ್ಯದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದವನಿಗೆ ನ್ಯಾಯಾಲಯದಿಂದ ʻವಿಶಿಷ್ಟ’ ಶಿಕ್ಷೆ: ದಂಡದ ಜೊತೆ 15 ದಿನಗಳ ಕಾಲ ರಸ್ತೆಯಲ್ಲಿ ನಿಂತು ‘ಸಮುದಾಯ ಸೇವೆ’ಗೆ ಆದೇಶ!

ಸುಳ್ಯ: ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುವವರಿಗೆ ಸುಳ್ಯ ನ್ಯಾಯಾಲಯವು ಒಂದು ಮರೆಯಲಾಗದ ಪಾಠ ಕಲಿಸಿದೆ. ಪದೇ ಪದೇ ನಿಯಮ ಉಲ್ಲಂಘಿಸುತ್ತಿದ್ದ ಸುಳ್ಯದ ನಿವಾಸಿ ರಕ್ಷಿತ್ ಜಿ ಎಂಬುವವನಿಗೆ ನ್ಯಾಯಾಲಯವು ದಂಡದ ಜೊತೆಗೆ, ಸುಳ್ಯ ಪೇಟೆಯ ಜಂಕ್ಷನ್‌ಗಳಲ್ಲಿ ನಿಂತು ಸಾರ್ವಜನಿಕರಿಗೆ ಸಂಚಾರ ನಿಯಮದ ಬಗ್ಗೆ ಅರಿವು ಮೂಡಿಸುವ ‘ಸಮುದಾಯ ಸೇವೆ’ (Community Service) ಮಾಡುವಂತೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:
ದಿನಾಂಕ 12/03/2026 ರಂದು ಸುಳ್ಯ ಪೇಟೆಯಲ್ಲಿ ಸಂಚಾರ ನಿಯಮಗಳನ್ನು ಹಲವು ಬಾರಿ ಉಲ್ಲಂಘನೆ ಮಾಡುತ್ತಿದ್ದ ರಕ್ಷಿತ್ ಜಿ. ವಿರುದ್ಧ ಸುಳ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಸಂತೋಷ್ ಬಿ.ಪಿ. ಅವರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಐಎಂವಿ ಕಾಯ್ದೆಯಡಿ (IMV Act) ಕಲಂ 119 R/w 177, 184 ಮತ್ತು 194(C) ಅಡಿಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ, ಸುಳ್ಯದ ಎಸ್.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.

ನ್ಯಾಯಾಲಯದ ವಿಶಿಷ್ಟ ತೀರ್ಪು:
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು (ಸಿಸಿ 42/26, 43/26, 44/26) ಆರೋಪಿತನ ತಪ್ಪುಗಳನ್ನು ಗಂಭೀರವಾಗಿ ಪರಿಗಣಿಸಿ ಎರಡು ಪ್ರಕರಣಗಳಲ್ಲಿ ಒಟ್ಟು 3,000 ರೂಪಾಯಿ ದಂಡ ವಿಧಿಸಲಾಗಿದೆ.

ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ತಲಾ 5 ದಿನಗಳಂತೆ, ಒಟ್ಟು 15 ದಿನಗಳ ಕಾಲ (ದಿನಾಂಕ 15/03/2026 ರಿಂದ 29/03/2026 ರವರೆಗೆ) ಸುಳ್ಯ ಪೇಟೆಯ ಜಂಕ್ಷನ್‌ಗಳಲ್ಲಿ ಸಂಚಾರ ನಿಯಮಗಳ ಫಲಕಗಳನ್ನು ಹಿಡಿದು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಅಲ್ಲದೆ ಆರೋಪಿತನ ಚಾಲನಾ ಪರವಾನಗಿಯನ್ನು (Driving License) ಮೂರು ತಿಂಗಳ ಕಾಲ ಅಮಾನತಿನಲ್ಲಿಡಲು ಆದೇಶಿಸಿದೆ.

ಜನರಲ್ಲಿ ಜಾಗೃತಿ:
ಕೇವಲ ದಂಡ ವಿಧಿಸಿ ಬಿಡುವ ಬದಲು, ಮಾಡಿದ ತಪ್ಪಿನ ಅರಿವಾಗುವಂತೆ ರಸ್ತೆಯಲ್ಲೇ ನಿಂತು ಸಾರ್ವಜನಿಕ ಸೇವೆ ಮಾಡುವಂತೆ ನೀಡಿದ ಈ ತೀರ್ಪು ಸುಳ್ಯದ ಜನರಲ್ಲಿ ಸಂಚಲನ ಮೂಡಿಸಿದೆ. ಪೊಲೀಸರು ಮತ್ತು ನ್ಯಾಯಾಲಯದ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಸ್ತೆ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ವಹಿಸುವವರಿಗೆ ಈ ಆದೇಶವು ಬಿಸಿ ಮುಟ್ಟಿಸಿದೆ.

error: Content is protected !!