ಕಾರ್ಕಳ: ಉಡುಪಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಸಭೆಯಲ್ಲಿ ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮಕ್ಕೆ ಶಕ್ತಿ ಯೋಜನೆಯ ಅಡಿಯಲ್ಲಿ ಆರಂಭವಾದ ಬಸ್ ಸೇವೆ ಕೆಲವೇ ದಿನಗಳಲ್ಲಿ ನಿಂತು ಹೋಗಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ಕಾರ್ಕಳ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳೆ ಅವರು ಧ್ವನಿ ಎತ್ತಿದ್ದಾರೆ.

ಸಭೆಯಲ್ಲಿ ಜನರ ಪರವಾಗಿ ಧ್ವನಿ ಎತ್ತಿದ ಅವರು, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಅಡ್ಡಿ ಪಡಿಸುತ್ತಿರುವ ಅಧಿಕಾರಿಗಳ ವಿರುದ್ಧ ತಕ್ಷಣವೇ ಬಸ್ ಸಂಚಾರ ಪುನರಾರಂಭಿಸದಿದ್ದಲ್ಲಿ ಧರಣಿ ಕುಳಿತುಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.

“ಕಾರ್ಕಳ ತಾಲೂಕಿನ ಪಳ್ಳಿ ಕಣಜಾರು ಮಾರ್ಗದ ಬಸ್ ಸಂಚಾರ ಕೆಲ ತಿಂಗಳ ಹಿಂದೆ ಆರಂಭವಾಗಿ ಕೆಲವೇ ದಿನಗಳಲ್ಲಿ ನಿಂತು ಹೋಯಿತು. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಈ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕು ಮತ್ತು ಗ್ರಾಮಸ್ಥರು ಮತ್ತೆ ಬಸ್ ಸೌಲಭ್ಯ ಪಡೆಯುವಂತೆ ಮಾಡಬೇಕು,” ಎಂದು ಅಜಿತ್ ಹೆಗ್ಡೆ ಮಾಳ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಮಟ್ಟದಲ್ಲಿ ಗ್ಯಾರಂಟಿ ಅದಾಲತ್ ನಡೆಸಿ ಸರಕಾರದ ಯೋಜನೆಯಿಂದ ವಂಚಿತರಾಗಿರುವವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿ ಜನ ಮನ್ನಣೆ ಗಳಿಸಿರುವ ಅಜಿತ್ ಹೆಗ್ಡೆ ಅವರ ಕಾರ್ಯವೈಖರಿ ಬಗ್ಗೆ ಕಾರ್ಕಳ ತಾಲೂಕಿನ ಜನತೆ ಹೆಮ್ಮೆ ಪಡುವಂತಾಗಿದೆ.