ರಿಯಾದ್: ಅರಬ್ ರಾಷ್ಟ್ರಗಳಲ್ಲಿ “ಕಫಾಲ” ಪ್ರಾಯೋಜಕತ್ವ ಆಧಾರಿತ ಕಾರ್ಮಿಕ ವ್ಯವಸ್ಥೆಗೆ ಸೌದಿ ಅರೇಬಿಯಾ ಅಧಿಕೃತವಾಗಿ ತೆರೆ ಎಳೆದಿದೆ. ಸುಮಾರು ಐವತ್ತು ವರ್ಷಗಳಿಂದ ಜಾರಿಯಲ್ಲಿದ್ದ ಈ ಕಠಿಣ ನಿಯಮಗಳಿಗೆ ಈಗ ತೆರೆ ಎಳೆಯಲಾಗಿದೆ. 2025ರ ಜೂನ್‌ನಲ್ಲಿ ಈ ವ್ಯವಸ್ಥೆಯನ್ನು ನಿಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಇದೀಗ ಅಧಿಕೃತವಾಗಿ ಜಾರಿಗೆ ತರಲಾಗಿದೆ.

ಕಫಾಲ ಅಂದರೆ “ಪ್ರಾಯೋಜಕತ್ವ” ಎಂಬ ಅರ್ಥ. ವಿದೇಶಿ ಕಾರ್ಮಿಕರು ಸೌದಿಯಲ್ಲಿ ಕೆಲಸ ಮಾಡಲು ಸ್ಥಳೀಯ ಪ್ರಾಯೋಜಕನನ್ನು ಹೊಂದಿರಬೇಕಾಗಿತ್ತು. ಈ ಪ್ರಾಯೋಜಕರು ಕಾರ್ಮಿಕರ ವೀಸಾ, ವಾಸಸ್ಥಾನ ಮತ್ತು ಪಾಸ್‌ಪೋರ್ಟ್‌ನ ಮೇಲಿನ ಸಂಪೂರ್ಣ ನಿಯಂತ್ರಣವನ್ನು ಹೊಂದಿದ್ದರು. ಇದರ ಪರಿಣಾಮವಾಗಿ ಕಾರ್ಮಿಕರು ತಮ್ಮ ಉದ್ಯೋಗದಾತನ ಅನುಮತಿ ಇಲ್ಲದೆ ಕೆಲಸ ಬದಲಾಯಿಸಲು, ದೇಶ ತೊರೆಯಲು ಅಥವಾ ತಮ್ಮ ಹಕ್ಕುಗಳನ್ನು ಉಪಯೋಗಿಸಲು ಸಾಧ್ಯವಾಗುತ್ತಿರಲಿಲ್ಲ. ಬಹಳಷ್ಟು ಕಾರ್ಮಿಕರು ಈ ವ್ಯವಸ್ಥೆಯ ಒಳಗೆ ಸಿಕ್ಕಿ ಜೀತದಾಳುಗಳಾಗಿ ಬದುಕಬೇಕಾಗಿತ್ತು.

ಈಗ ಹೊಸ ಕಾರ್ಮಿಕ ನೀತಿಯಲ್ಲಿ ಸೌದಿ ಸರ್ಕಾರವು ಗುತ್ತಿಗೆ ಆಧಾರಿತ ಉದ್ಯೋಗ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ವ್ಯವಸ್ಥೆಯಲ್ಲಿ ಕಾರ್ಮಿಕರು ತಮ್ಮ ಕೆಲಸದ ಕುರಿತು ಹೆಚ್ಚು ಸ್ವಾತಂತ್ರ್ಯ ಮತ್ತು ನಿಯಂತ್ರಣ ಹೊಂದುತ್ತಾರೆ. ಅವರು ತಮ್ಮ ಹಾಲಿ ಉದ್ಯೋಗದಾತರ ಪೂರ್ವಾನುಮತಿ ಇಲ್ಲದೆ ಕೆಲಸ ಬದಲಾಯಿಸಲು ಸಾಧ್ಯವಾಗುತ್ತದೆ. ಅಲ್ಲದೆ, ಪ್ರಾಯೋಜಕರ ಅನುಮತಿ ಅಥವಾ ಎಕ್ಸಿಟ್ ವೀಸಾ ಇಲ್ಲದೇ ದೇಶ ತೊರೆಯಲು ಅವಕಾಶ ನೀಡಲಾಗಿದೆ. ಇದರ ಪರಿಣಾಮವಾಗಿ ವಲಸೆ ಕಾರ್ಮಿಕರ ಜೀವನದಲ್ಲಿ ಬಹುಮುಖ್ಯ ಬದಲಾವಣೆ ಸಂಭವಿಸುವ ನಿರೀಕ್ಷೆಯಿದೆ.