ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸಶಸ್ತ್ರ ಪಡೆಗಳೊಂದಿಗೆ ದೀಪಾವಳಿ ಆಚರಿಸುವ ತಮ್ಮ ವಾರ್ಷಿಕ ಸಂಪ್ರದಾಯವನ್ನು ಮುಂದುವರಿಸಿಕೊಂಡು, ಸೋಮವಾರ ಗೋವಾ ಮತ್ತು ಕಾರವಾರ ಕರಾವಳಿಯಲ್ಲಿರುವ ಐಎನ್‌ಎಸ್ ವಿಕ್ರಾಂತ್ ನೌಕೆಯಲ್ಲಿ ನೌಕಾಪಡೆಯ ಸಿಬ್ಬಂದಿಯೊಂದಿಗೆ ಬೆಳಕಿನ ಹಬ್ಬವನ್ನು ಸಂಭ್ರಮಿಸಿದರು.
ನೂರಾರು ಧೈರ್ಯಶಾಲಿ ನೌಕಾಪಡೆಯ ಯೋಧರನ್ನು ಉದ್ದೇಶಿಸಿ ಮಾತನಾಡಿದ ಅವರು, “ನೌಕಾಪಡೆಯ ವೀರರ ಜೊತೆ ಪವಿತ್ರ ಹಬ್ಬವನ್ನು ಆಚರಿಸುವುದು ನನ್ನ ಅದೃಷ್ಟ” ಎಂದು ಹೇಳಿದರು.
“ಇಂದು ಅದ್ಭುತ ದಿನ. ಒಂದು ಕಡೆ ಸಾಗರದ ಅನಂತ ದಿಗಂತಗಳು, ಇನ್ನೊಂದು ಕಡೆ ಭಾರತ ಮಾತೆಯ ಧೈರ್ಯಶಾಲಿ ಸೈನಿಕರ ಶೌರ್ಯ — ಈ ದೃಶ್ಯ ಸ್ಮರಣೀಯವಾಗಿದೆ. ಸಾಗರದ ನೀರಿನ ಮೇಲೆ ಹೊಳೆಯುವ ಸೂರ್ಯಕಿರಣಗಳು, ನಮ್ಮ ಸೈನಿಕರು ಬೆಳಗಿಸಿದ ದೀಪಾವಳಿಯ ದೀಪಗಳಂತೆ ತೋರುತ್ತಿವೆ,” ಎಂದು ಪ್ರಧಾನಿ ಮೋದಿ ಭಾವೋದ್ರಿಕ್ತರಾಗಿದ್ದರು.
ಭಾರತದ ಮೊದಲ ಸ್ಥಳೀಯ ವಿಮಾನವಾಹಕ ನೌಕೆಯಾದ ಐಎನ್‌ಎಸ್ ವಿಕ್ರಾಂತ್ ದೇಶದ ಸೈನಿಕ ಶಕ್ತಿಯ ಪ್ರತೀಕ ಎಂದು ಅವರು ಪ್ರಶಂಸಿಸಿದರು. “ಕೆಲವೇ ತಿಂಗಳುಗಳ ಹಿಂದೆ, ವಿಕ್ರಾಂತ್‌ನ ಶೌರ್ಯವು ಪಾಕಿಸ್ತಾನದ ನಿದ್ದೆಗೆಡಿಸಿತ್ತು. ಆಪರೇಷನ್ ಸಿಂಧೂರ್ ವೇಳೆ ನೌಕಾಪಡೆ ಹುಟ್ಟಿಸಿದ ಭಯ, ವಾಯುಪಡೆ ತೋರಿದ ಕೌಶಲ್ಯ, ಸೇನೆಯ ಶೌರ್ಯ ಮತ್ತು ಮೂರೂ ಪಡೆಗಳ ಅಸಾಧಾರಣ ಸಮನ್ವಯದಿಂದ ಪಾಕಿಸ್ತಾನ ಕೆಲವೇ ದಿನಗಳಲ್ಲಿ ಮಂಡಿಯೂರಿತು,” ಎಂದು ಹೇಳಿದರು.
“ಐಎನ್‌ಎಸ್ ವಿಕ್ರಾಂತ್ ಕೇವಲ ಯುದ್ಧನೌಕೆಯಲ್ಲ, ಅದು 21ನೇ ಶತಮಾನದ ಭಾರತದ ಪರಿಶ್ರಮ, ಪ್ರತಿಭೆ ಮತ್ತು ಬದ್ಧತೆಯ ಸಂಕೇತ,” ಎಂದು ಪ್ರಧಾನಿ ಮೋದಿ ಅಭಿಮಾನದೊಂದಿಗೆ ಹೇಳಿದರು.
ಅವರು ಮುಂದುವರಿಸಿ, “ಬ್ರಹ್ಮೋಸ್ ಮತ್ತು ಆಕಾಶ್ ಕ್ಷಿಪಣಿಗಳು ಆಪರೇಷನ್ ಸಿಂಧೂರ್ ಸಮಯದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿವೆ. ಈಗ ಹಲವು ರಾಷ್ಟ್ರಗಳು ಈ ಕ್ಷಿಪಣಿಗಳನ್ನು ಖರೀದಿಸಲು ಆಸಕ್ತಿ ತೋರಿಸುತ್ತಿವೆ,” ಎಂದರು.
“ಜನರು ದೀಪಾವಳಿಯನ್ನು ತಮ್ಮ ಕುಟುಂಬದವರೊಂದಿಗೆ ಆಚರಿಸುತ್ತಾರೆ. ನಾನೂ ಹಾಗೆಯೇ, ಆದರೆ ನನ್ನ ಕುಟುಂಬವೆಂದರೆ ಈ ದೇಶದ ಸೇನೆ ಮತ್ತು ಭದ್ರತಾ ಸಿಬ್ಬಂದಿ. ಅವರೊಂದಿಗೆ ಈ ಹಬ್ಬವನ್ನು ಆಚರಿಸುವುದರಲ್ಲಿ ನನಗೆ ಹೆಮ್ಮೆ ಇದೆ,” ಎಂದು ಮೋದಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಅವರು ಗುಜರಾತ್‌ನ ಕಚ್ ಗಡಿಯಲ್ಲಿ ಬಿಎಸ್‌ಎಫ್, ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸಿಬ್ಬಂದಿಯೊಂದಿಗೆ ದೀಪಾವಳಿಯನ್ನು ಆಚರಿಸಿದ್ದರು.