ಸಂಕೇತ ಸಂಖ್ಯೆ ಆಧಾರದಲ್ಲಿ ಎಸೆಸೆಲ್ಸಿ ಉತ್ತರಪತ್ರಿಕೆ ರವಾನೆ

ಮಂಗಳೂರು: ಎಸೆಸೆಲ್ಸಿ ಮೌಲ್ಯ ಮಾಪನ ಇನ್ನಷ್ಟು ನಿಷ್ಪಕ್ಷಪಾತವಾಗಿ ನಡೆಯುವಂತಾಗಲು ಪ್ರೌಢಶಿಕ್ಷಣ ಮಂಡಳಿ ಹೊಸ ಕ್ರಮಕ್ಕೆ ಮುಂದಾಗಿದೆ.

ಮೌಲ್ಯಮಾಪಕರಿಗೆ ಇನ್ನು ಮುಂದು ತಾವು ಮೌಲ್ಯಮಾಪನ ಮಾಡುವ ಉತ್ತರಪತ್ರಿಕೆ ಯಾವ ಜಿಲ್ಲೆಯದು, ಯಾವ ಪರೀಕ್ಷಾ ಕೇಂದ್ರದ್ದು ಎಂಬುದು ತಿಳಿಯುವುದಿಲ್ಲ.. ಯಾಕಂದ್ರೆ ಪರೀಕ್ಷಾ ಕೇಂದ್ರದಿಂದ ಕಳುಹಿಸುವ ಉತ್ತರ ಪತ್ರಿಕೆಗಳ ಕಟ್ಟಿನ ಮೇಲೆ “ಸಂಕೇತ ಸಂಖ್ಯೆ’ ಹೊರತುಪಡಿಸಿ ಬೇರೇನೂ ಇರದು.

ಈ ಹಿಂದೆ ಕಟ್ಟುಗಳ ಮೇಲೆ ಪರೀಕ್ಷಾ ಕೇಂದ್ರದ ಹೆಸರು, ಮತ್ತಿತರ ವಿವರದೊಂದಿಗೆ ಕಸ್ಟೋಡಿಯನ್‌ ಸಹಿ, ಮುದ್ರೆ ಹಾಕಬೇಕಿತ್ತು. ಇದರಿಂದ ಉತ್ತರ ಪತ್ರಿಕೆಗಳ ಜಿಲ್ಲೆ ಇತ್ಯಾದಿ ಮಾಹಿತಿ ಮೌಲ್ಯಮಾಪಕರಿಗೆ ಲಭಿಸುತ್ತಿತ್ತು.

ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಸಂಕೇತ ಸಂಖ್ಯೆಯನ್ನು ಆಯಾ ಪರೀಕ್ಷೆಯ ದಿನವೇ ನೀಡಲಿದ್ದು, ಅವರು ಲಾಗಿನ್‌ ಆಗಿ ಪಡೆದು ಉತ್ತರ ಪತ್ರಿಕೆಯ ಕಟ್ಟಿನಲ್ಲಿ ನಮೂದಿಸಬೇಕು. ಜತೆಗೆ ಪರೀಕ್ಷೆಯ ವಿಷಯ, ದಿನಾಂಕ, ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ, ಉತ್ತರ ಪತ್ರಿಕೆಗಳ ಸಂಖ್ಯೆ ಎಂಬುದನ್ನು ಮಾತ್ರ ನಮೂದಿಸಬಹುದು.

ಹೀಗೆ ಸಿದ್ಧಪಡಿಸಿದ ಉತ್ತರ ಪತ್ರಿಕೆಗಳ ಕಟ್ಟನ್ನು ರೂಟ್‌ ಆಫೀಸರ್‌ಗೆ ಹಸ್ತಾಂತರಿಸಬೇಕು. ಅವರು ಅದನ್ನು ಜಿಲ್ಲಾ ಕೇಂದ್ರಕ್ಕೆ ತಲುಪಿಸಬೇಕು. ಅದರಂತೆ ಸ್ಟ್ರಾಂಗ್‌ ರೂಂನಲ್ಲಿ ಭದ್ರತೆಯಲ್ಲಿಡಬೇಕು. ಎಲ್ಲ ಪರೀಕ್ಷೆ ಮುಗಿದ ಬಳಿಕ ಇಲಾಖೆಯ ಸೂಚನೆಯ ಪ್ರಕಾರ ಈ ಕಟ್ಟುಗಳನ್ನು ಮೌಲ್ಯಮಾಪನ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ.

ಸಾಮಾನ್ಯವಾಗಿ ಫಲಿತಾಂಶದ ಬಳಿಕ ಮೌಲ್ಯ ಮಾಪನದ ಬಗ್ಗೆ ಕೆಲವು ಜಿಲ್ಲೆಗಳಲ್ಲಿ ಆಕ್ಷೇಪ ಕೇಳಿ ಬರುತ್ತದೆ. ಯಾವ ಜಿಲ್ಲೆಯ ಉತ್ತರಪತ್ರಿಕೆ ಯಾವ ಜಿಲ್ಲೆಗೆ ಹೋಗಿದೆ ಎಂಬಿತ್ಯಾದಿ ಮಾಹಿತಿ ತಿಳಿಯುವ ಕಾರಣ ಈ ಪರಿಸ್ಥಿತಿ ಎದುರಾಗುತ್ತಿತ್ತು. ಈ ಬಾರಿ ಎಸೆಸೆಲ್ಸಿ ಉತ್ತರ ಪತ್ರಿಕೆಗಳ ಕಟ್ಟುಗಳಲ್ಲಿ ಯಾವುದೇ ಜಿಲ್ಲೆ ಅಥವಾ ಇತರ ವಿವರ ಬರೆಯಬಾರದು ಎಂಬ ಬಗ್ಗೆ ಇಲಾಖೆಯಿಂದ ಸೂಚನೆ ಬಂದಿದೆ. ಸಂಕೇತ ಸಂಖ್ಯೆ ಮಾತ್ರ ಹಾಕಲಾಗುತ್ತದೆ.- ಶಶಿಧರ್‌, ಡಿಡಿಪಿಐ, ದ. ಕ.

error: Content is protected !!