ಪಳ್ಳಿಯಲ್ಲಿ ಫಿಶ್ ಮೀಲ್ ‘ಘಾಟು’: ರಂಗಕ್ಕೆ ಇಳಿದ ಜಿಲ್ಲಾಧಿಕಾರಿ- ಪರಿಸರ ಮಾರಕ ಘಟಕಕ್ಕೆ ಬೀಳುತ್ತಾ ಬೀಗ?

ಕಾರ್ಕಳ: ಪಳ್ಳಿ ಗ್ರಾಮದ ಕೊಡಿಮಲೆ ಮತ್ತು ಕೌಡೂರು ಪರಿಸರದಲ್ಲಿ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿರುವ ಅನಧಿಕೃತ ಫಿಶ್ ಮೀಲ್ ಘಟಕ ನಿರ್ಮಾಣದ ಕುರಿತು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿಕೆ ಗಂಭೀರವಾಗಿ ಸ್ಪಂದಿಸಿದ್ದು, ನಿಯಮ ಬಾಹಿರವಾಗಿ ಕಾಮಗಾರಿ ನಡೆಯುತ್ತಿದ್ದರೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.

ಮಾರ್ಚ್‌ 6ರಂದರು ಸುಮಾರು 50ಕ್ಕೂ ಹೆಚ್ಚು ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಯವರು, “ಯಾವುದೇ ಬೃಹತ್ ಕೈಗಾರಿಕೆ ಅಥವಾ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಗ್ರಾಮ ಪಂಚಾಯತ್‌ನ ಪೂರ್ವಾನುಮತಿ ಕಡ್ಡಾಯ. ಪಂಚಾಯತ್ ಪರವಾನಗಿ ಇಲ್ಲದೆ ನಡೆಯುವ ಯಾವುದೇ ಕಾಮಗಾರಿ ಕಾನೂನುಬಾಹಿರ,” ಎಂದು ಸ್ಪಷ್ಟಪಡಿಸಿದರು. ಈ ಕುರಿತು ತಕ್ಷಣವೇ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.

ಅನಧಿಕೃತ ಕಟ್ಟಡಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಉಲ್ಲೇಖಿಸಿದ ಜಿಲ್ಲಾಧಿಕಾರಿಗಳು, “ಪರವಾನಗಿ ಪಡೆಯದೆ ನಿರ್ಮಾಣವಾದ ಕಟ್ಟಡಗಳನ್ನು ಸ್ಥಳೀಯ ಗ್ರಾಮ ಪಂಚಾಯತ್ ಮೂಲಕವೇ ತೆರವುಗೊಳಿಸುವ ಅಧಿಕಾರ ಆಡಳಿತಕ್ಕಿದೆ. ಒಂದು ವೇಳೆ ಪಳ್ಳಿ ಪರಿಸರದಲ್ಲಿ ನಿಯಮ ಉಲ್ಲಂಘನೆಯಾಗಿದ್ದರೆ, ಅದನ್ನು ಕಾನೂನುಬದ್ಧವಾಗಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು,” ಎಂದರು.

ಪಳ್ಳಿ ಕೊಡಿಮಲೆ ಭಾಗದಲ್ಲಿ ಯಾವುದೇ ಅನುಮತಿ ಪಡೆಯದೆ ಗುಟ್ಟಾಗಿ ಫಿಶ್ ಮೀಲ್ ನಿರ್ಮಾಣವಾಗುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಘಟಕದಿಂದ ಹೊರಬರುವ ರಾಸಾಯನಿಕಯುಕ್ತ ತ್ಯಾಜ್ಯ ಮತ್ತು ಅಸಹನೀಯ ದುರ್ವಾಸನೆಯಿಂದ ಸ್ಥಳೀಯ ಕೃಷಿ ಭೂಮಿ ಹಾಗೂ ಜಲಮೂಲಗಳು ನಾಶವಾಗುತ್ತವೆ ಎಂಬುದು ಜನರ ದೂರು. ಅಲ್ಲದೆ ಈ ಭಾಗದ ನಿವಾಸಿಗಳು ಮತ್ತು ಶಾಲಾ ಮಕ್ಕಳ ಆರೋಗ್ಯದ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆ ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಲ್ಲದೆ ಈ ಬಗ್ಗೆ ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಜಿಲ್ಲಾಧಿಕಾರಿಗಳ ಭರವಸೆಯ ಬೆನ್ನಲ್ಲೇ ಈಗ ಚೆಂಡು ಸಂಬಂಧಪಟ್ಟ ಇಲಾಖಾಧಿಕಾರಿ ಸ್ವರೂಪ ಟಿ.ಕೆ. ಅವರ ಅಂಗಳದಲ್ಲಿದೆ. ಸ್ಥಳೀಯ ಗ್ರಾಮ ಪಂಚಾಯತ್ ಈ ಅನಧಿಕೃತ ಕಾಮಗಾರಿಗೆ ನೀಡಲಾಗಿರುವ ನೋಟಿಸ್‌ಗಳ ಸ್ಥಿತಿಗತಿ ಮತ್ತು ಇಲಾಖಾ ವರದಿಗಳ ಮೇಲೆ ಫಿಶ್ ಮಿಲ್‌ನ ಭವಿಷ್ಯ ನಿರ್ಧಾರವಾಗಲಿದೆ. ಅಲ್ಲದೆ ಪಂಚಾಯತ್ ತೆಗೆದುಕೊಳ್ಳುವ ನಿರ್ಧಾರದ ಮೇಲೂ ಗ್ರಾಮಸ್ಥರ ಕಣ್ಣು ನೆಟ್ಟಿದೆ.

ಊರು ನಾರುವ ಮುನ್ನ ಎಚ್ಚೆತ್ತುಕೊಳ್ಳಿ!! ಕಾರ್ಕಳದ ಪಳ್ಳಿ ಗ್ರಾಮಕ್ಕೆ ವಕ್ಕರಿಸಿತಾ ಫಿಷ್‌ ಮೀಲ್‌ ಘಟಕ?

error: Content is protected !!