ಮಂಗಳೂರು: ಕರ್ನಾಟಕ ರಾಜ್ಯ ಯುವ ಆಯೋಗದ 40ನೇ ವಾರ್ಷಿಕೋತ್ಸವ ಮತ್ತು ಕ್ರಿಸ್ತ ಜಯಂತಿ ಜುಬಿಲಿ ವರ್ಷ 2025ರ ಪ್ರಯುಕ್ತ, ಮಂಗಳೂರು ಧರ್ಮಪ್ರಾಂತ್ಯದ ಭಾರತೀಯ ಕಥೋಲಿಕ ಯುವ ಸಂಚಾಲನ (ICYM), ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು (SJEC), ಯುವ ಆಯೋಗ ಮಂಗಳೂರು ಧರ್ಮಪ್ರಾಂತ್ಯ ಹಾಗೂ ಕರ್ನಾಟಕ ಪ್ರಾದೇಶಿಕ ಯುವ ಆಯೋಗದ ಸಹಯೋಗದಲ್ಲಿ “Career Expo – 2025” ಎಂಬ ಭವ್ಯ ಉದ್ಯೋಗ ಮೇಳವನ್ನು ನವೆಂಬರ್ 1 ಮತ್ತು 2 ರಂದು ಮಂಗಳೂರಿನ ವಾಮಂಜೂರು ಎಸ್‌ಜೆಇಸಿಯಲ್ಲಿ ಆಯೋಜಿಸಲಾಗಿದೆ ಎಂದು ರೆವೆರೆಂಡ್ ಫಾದರ್ ಅಶ್ವಿನ್ ಕಾರ್ಡೊಜಾ ಮಾಹಿತಿ ನೀಡಿದರು.
ಮಂಗಳೂರಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಅತೀ ವಂ. ಪೀಟರ್ ಪೌಲ್ ಸಲ್ಮಾನ್ಯಾ, ಮಂಗಳೂರು ಧರ್ಮಾಧ್ಯಕ್ಷರು ಹಾಗೂ ಅತೀ ವಂ. ಹೆನ್ರಿ ಡಿಸೋಜಾ, ಬಳ್ಳಾರಿ ಧರ್ಮಾಧ್ಯಕ್ಷರು ಮತ್ತು ಕರ್ನಾಟಕ ಪ್ರಾದೇಶಿಕ ಯುವ ಆಯೋಗದ ಮುಖ್ಯಸ್ಥರ ಮಾರ್ಗದರ್ಶನದಲ್ಲಿ ಈ ಮೇಳ ನಡೆಯಲಿದೆ ಎಂದು ವಿವರಿಸಿದರು.
ವಂ. ಫಾ. ಅಶ್ವಿನ್ ಲೋಹಿತ್ ಕಾರ್ಡೊಜಾ (ಕರ್ನಾಟಕ ಪ್ರಾದೇಶಿಕ ಹಾಗೂ ಮಂಗಳೂರು ಧರ್ಮಪ್ರಾಂತ್ಯ ಯುವ ನಿರ್ದೇಶಕರು), ವಿಲಿನಾ ಗೊನ್ಸಾಲಿಸ್ (ಕರ್ನಾಟಕ ಪ್ರಾದೇಶಿಕ ಯುವ ಆಯೋಗ ಅಧ್ಯಕ್ಷೆ), ವಂ. ವಿಲ್ಫ್ರೆಡ್ ಪ್ರಕಾಶ್ (ಎಸ್‌ಜೆಇಸಿ ನಿರ್ದೇಶಕ), ವಿಜೋಯ್ ಅಶ್ವಿನ್ ಕಾರ್ಡೊಜಾ (ICYM ಅಧ್ಯಕ್ಷ), ಹಾಗೂ ಯುವ ಸಂಯೋಜಕ ಜೈಸನ್ ಕ್ರಾಸ್ತಾ ಮತ್ತು ಅವರ ತಂಡದ ಮುಂದಾಳತ್ವದಲ್ಲಿ ಕಾರ್ಯಕ್ರಮ ಆಯೋಜನೆಯಾಗಿದೆ ಎಂದರು.
ಉದ್ಯೋಗಾವಕಾಶಗಳ ಕೊರತೆಯಿಂದ ಸಂಕಷ್ಟದಲ್ಲಿರುವ ಯುವಕರಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಈ Career Expo ಆಯೋಜಿಸಲಾಗಿದ್ದು, 250ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿವೆ. ಈಗಾಗಲೇ 1000ಕ್ಕೂ ಹೆಚ್ಚು ಯುವಕರು ನೋಂದಾಯಿಸಿಕೊಂಡಿದ್ದಾರೆ. 50ಕ್ಕೂ ಹೆಚ್ಚು ಸ್ಟಾರ್ಟ್‌ಅಪ್ ಸ್ಟಾಲುಗಳೂ ಇರಲಿವೆ. ಈ ಮೇಳವು ಎಲ್ಲಾ ಧರ್ಮಗಳ ಯುವಕರಿಗೂ ಮುಕ್ತವಾಗಿದ್ದು, ಉದ್ಯೋಗ ಹುಡುಕುತ್ತಿರುವವರಿಗೆ ಅಪರೂಪದ ಅವಕಾಶವನ್ನು ಒದಗಿಸಲಿದೆ. ಆಯೋಜಕರು ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಆಶ್ಲೀ ಡಿಸೋಜಾ, ವಿಲಿನಾ ಗೊನ್ಸಾಲ್ವೆಸ್, ಮರಿಯಾ ಡಿಸಿಲ್ವಾ, ವಿಜೋಯ್ ಕಾರ್ಡೊಜಾ ಹಾಗೂ ಜೆಸ್ಸಿಕಾ ಸಾಂಥ್‌ಮೇಯರ್ ಉಪಸ್ಥಿತರಿದ್ದರು.