ಮಂಗಳೂರು: ಕೇರಳ ಮಲಪ್ಪುರಂ ಮೂಲದ ಗಲ್ಫ್ ಉದ್ಯಮಿ, ರಾಜಕಾರಣಿ ಅಶ್ರಫ್ ತಾವರೆಕಡನ್ ಅವರನ್ನು ಮದುವೆ ಹೆಸರಲ್ಲಿ ಹನಿಟ್ರ್ಯಾಪ್ ಮಾಡಿ, ಅವರಿಂದ ಸುಮಾರು ₹ 44 ಲಕ್ಷ ಹಣ ಪೀಕಿಸಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪಿಗಳ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಅವರನ್ನು ಇದುವರೆಗೆ ಬಂಧಿಸಲಾಗಿಲ್ಲ. ಇದರ ನಡುವೆ ಕೆಲವು ಸಮುದಾಯದ ಮುಖಂಡರು, ಇನ್ನಿತರರು ಸೇರಿ ಕೇಸ್ ವಾಪಸ್ ತೆಗೆದುಕೊಳ್ಳುವಂತೆ ತೀವ್ರ ಒತ್ತಡ ಹಾಕುತ್ತಿದ್ದಾರೆ ಎಂದು ಸಂತ್ರಸ್ಥ ಉದ್ಯಮಿ ಅಶ್ರಫ್ ಪರ ಲಾಯರ್ ಅಡ್ವೊಕೇಟ್ ಸೌಧಾ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗಲ್ಫ್ ಉದ್ಯಮಿ ಅಶ್ರಫ್(53) ಹನಿಟ್ರ್ಯಾಪ್‌ಗೊಳಗಾದ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಅಶ್ರಫ್ ಅವರಿಗೆ ಮೋಸ ಮಾಡಿದ ಆರೋಪಿಗಳಾದ ವಿಟ್ಲದ ಮುಹಮ್ಮದ್ ಬಶೀರ್ ಕಡಂಬು, ಮಾಣಿ ಸಫಿಯಾ, ಆಯಿಷತ್ ಮಿಶ್ರಿಯಾ ಕೆಪಿ., ತಾಯಿ ಜುಬೈದಾ, ಕೇರಳದ ಬ್ರೋಕರ್ ಸಫಿಯಾ, ಇಬ್ಬರು ಅಪರಿಚಿತರು ಸೇರಿ 9 ಮಂದಿಯ ವಿರುದ್ಧ ಕೇಸ್ ದಾಖಲಾಗಿದ್ದು, ಅವರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದ್ದರು.
ಮಂಗಳೂರಿನ ಮಾಲ್‌ನಲ್ಲಿ ಫೋಟೋ
ಮಾಣಿಯ ಸೆಫಿಯಾ, ಜುಬೈದಾ ಹಾಗೂ ಬಶೀರ್ ಕಡಂಬು ಅವರು ಅಶ್ರಫ್‌ರನ್ನು ಸೆ.24ರಂದು ಮಂಗಳೂರಿನ ಸಿಟಿ ಮಾಲ್‌ಗೆ ಹೆಣ್ಣು ತೋರಿಸಲು ಕರೆಸುತ್ತಾರೆ. ಮಂಗಳೂರಿನ ಮಾಲ್‌ನಲ್ಲಿ ಬಶೀರ್ ಕಡಂಬು ಮಾಣಿ ಸೇಫಿಯಳನ್ನು ಅಶ್ರಫ್ ಜೊತೆ ನಿಲ್ಲಿಸಿ ಫೋಟೋ ತೆಗೆಸ್ತಾರೆ. ಆದರೆ ಅಶ್ರಫ್ ಈಕೆ ಕೇರಳ ಮೂಲದ ಹೆಣ್ಣಲ್ಲ ಅಂತ ವಾಪಸ್ ಹೋಗ್ತಾರೆ. ವಾಪಾಸ್ ಹೋದ ನಂತರ ಆಯಿಷತ್ ಮಿಶ್ರಿಯಾ, ಬಶೀರ್, ಸೆಫಿಯಾ, ಅಮ್ಮ ಜುಬೈದಾ ಅಶ್ರಫ್‌ಗೆ ಕರೆ ಮಾಡಿ, ʻನೀವು ಮದುವೆಯಾಗ್ಬೇಕು, ಇಲ್ಲವಾದರೆ ನಿಮ್ಮ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಮಾಡುತ್ತೇವೆ. ಫ್ಯಾಮಿಲಿ ಮೆಂಬರ್ಸ್‌ಗೆ ಕಳಿಸಿಕೊಡ್ತೇವೆʼ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಬಶೀರ್ ಹಾಗೂ ಸೆಫಿಯಾ ಒಂದು ಕೋಟಿ ರೂ. ಹಣ ಕೊಟ್ಟರೆ ಫೋಟೋ, ವಿಡಿಯೋ ಡಿಲೀಟ್ ಮಾಡುವುದಾಗಿ ಆಫರ್ ಮಾಡಿದ್ದಾರೆ ಎಂದು ಸೌಧಾ ಆರೋಪಿಸಿದರು.
40 ಲಕ್ಷ ಹಣ ಸುಲಿಗೆ
ಅಶ್ರಫ್‌ರನ್ನು ವಿಟ್ಲಕ್ಕೆ ಕರೆಸಿ ಮೊದಲು ರೂ. 5 ಲಕ್ಷ ಹಣವನ್ನು ಸುಲಿಗೆ ಮಾಡಿದ್ದಾರೆ. ಅಲ್ಲದೆ ರೂ 24.80 ಲಕ್ಷ ಹಣವನ್ನು ಆನ್‌ಲೈನ್ ಟ್ರಾನ್ಸಾಕ್ಷಾನ್ ಮಾಡಿಸಿದಲ್ಲದೆ, 20 ಲಕ್ಷವನ್ನು ನಗದು ರೂಪದಲ್ಲಿ ಪಡೆದಿದ್ದಾರೆ. ಹಣವನ್ನು ಬಶೀರ್, ಮಾಣಿ ಸೆಫಿಯಾ, ಆಯಿಷಾ ಮಿಶ್ರಿಯಾ ಸೇರಿ ಒಟ್ಟು ₹44.80 ಲಕ್ಷ ಬೇರೆ ಅಕೌಂಟ್‌ಗಳಿಗೆ ವರ್ಗಾಯಿಸಿದ್ದಾರೆ. ಆಗ ಅಶ್ರಫ್‌ಗೆ ತಾನು ವಂಚನೆಗೊಳಗಾಗುತ್ತಿರುವುದು ಅರಿವಿಗೆ ಬಂದಿತು ಎಂದು ಸೌಧ ತಿಳಿಸಿದರು.
ಇದಾಗಿ ಕೆಲವು ದಿನಗಳ ನಂತರ ಮಾಣಿ ಸೆಫಿಯಾಳೇ ಸಬೀನಾ ಬಾನು ಎಂಬ ಹೆಸರಲ್ಲಿ ಅಶ್ರಫ್‌ಗೆ ಕರೆ ಮಾಡಿ, ನೀವು ಇಷ್ಟೆಲ್ಲ ದುಡ್ಡು ಕೊಟ್ಟಿದ್ದೀರಲ್ಲ ಎಲ್ಲ ಸರಿ ಮಾಡ್ತೇನೆ, ನೀವು ವಿಟ್ಲಕ್ಕೆ ಬನ್ನಿ ನಿಮ್ಮನ್ನು ಹೆದರಿಸುವ ಆ ವಿಡಿಯೋ ಯಾವುದು ಎಂದು ನನಗೆ ಗೊತ್ತಿದ್ದು, ಅದನ್ನು ನಿಮಗೆ ನಾನು ತೋರಿಸ್ತೇನೆ ಎಂದ ಹೇಳಿ ಕರೆಸಿಕೊಳ್ಳುತ್ತಾಳೆ. ಅಶ್ರಫ್ ಅಲ್ಲಿಗೆ ಹೋದಾಗ ಮಾಣಿ ಸಫಿಯಾಳೇ ಸಬೀನಾ ಹೆಸರಲ್ಲಿ ಕರೆ ಮಾಡಿರುವುದು ಅರಿವಾಗಿ ವಾಪಸ್ ಕೇರಳಕ್ಕೆ ಹೋಗಿದ್ದಾಗಿ ಅಡ್ವೊಕೇಟ್ ವಿವರಿಸಿದರು.
ಮತ್ತೆ 4 ಲಕ್ಷಕ್ಕೆ ಡಿಮ್ಯಾಂಡ್
ಇಷ್ಟಕ್ಕೂ ಸುಮ್ಮನಾಗದ ಸಫೀಯಾ ಮತ್ತೆ ₹4 ಲಕ್ಷಕ್ಕೆ ಡಿಮ್ಯಾಂಡ್ ಮಾಡಿ ಜಾನ್ವಿರಾಜ್ ಹಾಗೂ ಸಬೀನಾ ಬಾನು ಎಂಬ ಖಾತೆಗೆ ₹4 ಲಕ್ಷ ಹಣ ಹಾಕಿಸಿದ್ದಾಳೆ. ತಮ್ಮ ಫೋಟೋ, ವಿಡಿಯೋ ಲೀಕ್ ಆಗ್ಬಹುದು ಎಂತ ಭಯದಲ್ಲಿಯೇ ಒಂದು ವರ್ಷ ಕಳೆದಿದ್ದಾರೆ. ಆದರೆ ಒತ್ತಡ ಹೆಚ್ಚಾದಾಗ ಒಂದು ವರ್ಷದ ಮುಂಚೆ ಪುತ್ತೂರಿಗೆ ಆಗಮಿಸಿ ಸಂಪ್ಯ ಠಾಣೆಗೆ ಬಂದು ಎನ್‌ಸಿ ಮಾಡಿಸಿದ್ದರು. ಆಗ ಕೆಲವು ಸಮುದಾಯದ ಮುಖಂಡರು ಬಶೀರ್ ಕಡಂಬು ಪರ ನಿಂತು ಅಶ್ರಫ್ ಅವರ ಮನವೊಲಿಸಿ ಕೇಸ್ ವಾಪಸ್ ಪಡೆಯಲು ಸೂಚಿಸಿದರು. ಇದಕ್ಕೆ ಒಪ್ಪದಿದ್ದಾಗ ಮುಖಂಡರು ಅಶ್ರಫ್ ಅವರನ್ನು ಬೆದರಿಸಿ, ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಒತ್ತಡ ಹೇರಿದ್ದರು ಎಂದು ಸೌಧ ಆರೋಪಿಸಿದರು. ಆದರೆ ಸಮುದಾಯದ ಮುಖಂಡರ ಹೆಸರನ್ನು ಸೌಧಾ ಬಹಿರಂಗಪಡಿಸಲು ಇಚ್ಚಿಸಲಿಲ್ಲ.
ಉದ್ಯಮಿ ಹೆಂಡತಿಗೆ ಖಾಸಗಿ ವಿಡಿಯೋ ರವಾನೆ
ಕೆಲವು ದಿನ ಆದ್ಮೇಲೆ ಸಫಿಯಾ ಹಾಗೂ ಬಶೀರ್ ಅಶ್ರಫ್ ಅವರ ಹೆಂಡ್ತಿಗೆ ಬೇರೆಯವರ ಖಾಸಗಿ ವಿಡಿಯೋ ಕಳಿಸಿ, ಈಗ ಬಂದಿದ್ದು ಈ ವಿಡಿಯೋ, ಮುಂದಿನ ಬಾರಿ ನಿಮ್ಮ ಗಂಡನ ವಿಡಿಯೋ ಬರ್ತದೆ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಆಗ ಹೆಂಡತಿ ಅಶ್ರಫ್‌ಗೆ ಕರೆ ಮಾಡಿ, ಈ ರೀತಿ ವಿಡಿಯೋ ಬಂದಿದ್ದು ನೀವು ಕೂಡಲೇ ಕಂಪ್ಲೈಂಟ್ ಕೊಡಿ, ನಮಗೆ ಹೆಣ್ಮಕ್ಕಳಿದ್ದು, ಲೀಕ್ ಆದ್ರೆ ಸಮಸ್ಯೆಯಾಗಬಹುದು ಸೂಚಿಸುತ್ತಾರೆ.
ಹೀಗಾಗಿ ಅಶ್ರಫ್ ವಿಟ್ಲ ಕಂಡಂಬುವಿನ ಮನೆಯ ವಿಳಾಸ ಹುಡುಕಿಕೊಂಡು ಬಂದು ವಿಟ್ಲ ಸ್ಟೇಷನ್‌ನಲ್ಲಿ ದೂರು ನೀಡಿದ್ದು, ಕಳೆದ ಶುಕ್ರವಾರ ರಾತ್ರಿ ಎಫ್‌ಐಆರ್ ಆಗಿದೆ. ಎಫ್‌ಐಆರ್ ಆಗಲು ತುಂಬಾ ಕಷ್ಟ ಪಟ್ಟಿದ್ದೇವೆ. ಉನ್ನತ ಅಧಿಕಾರಿಗಳು ಅಭಿನಂದನೆ ಸಲ್ಲಿಸುತ್ತೇವೆ ಎಂದು ಸೌಧ ಹೇಳಿದರು.

ಆರೋಪಿಗಳ ಇನ್ನೂ ಬಂಧನವಾಗಿಲ್ಲ
ಆದರೆ ಆರೋಪಿಗಳನ್ನು 8 ದಿವಸ ಆದರೂ ಬಂಧಿಸಿಲ್ಲ. ಕಳೆದ 8 ದಿನದಿಂದ ಸ್ಟೇಷನ್‌ಗೆ ಬರ್ತಾ ಇದ್ದಾರೆ. ಆದರೆ ಅಪರಾಧಿಗಳು ಬೇರೆ ಬೇರೆ ನಂಬರ್‌ನಿಂದ ಕಾಲ್ ಮಾಡಿ, ಕೇಸ್ ವಾಪಸ್ ಕೇಸ್ ತೆಗೆದುಕೊಳ್ಳಿ ಎಂದು ಒತ್ತಡ ಹಾಕುತ್ತಿರುವುದಾಗಿ ಆರೋಪಿಸಿದರು. ಮೊನ್ನೆ ಮುಸ್ತಫಾ ಎನ್ನುವವನು ಕರೆ ಮಾಡಿ ಕೇಸ್ ವಾಪಸ್ ತೆಗೆದುಕೊಳ್ಳದೇ ಇದ್ದಾರೆ ನಿಮ್ಮನ್ನು ಹಾಗೂ ನಿಮ್ಮ ಲಾಯರನ್ನು ಹೊರಗಡೆ ನೋಡಿಕೊಳ್ತೇವೆ ಎಂದು ಬೆದರಿಕೆ ಕರೆ ಮಾಡಿದ್ದು, ಇವನ ವಿರುದ್ಧ ಬಂಟ್ವಾಳದಲ್ಲಿ ಎನ್‌ಸಿ ಮಾಡಿದ್ದಾಗಿ ಅವರು ವಿವರಿಸಿದರು.
ಅಶ್ರಫ್ ಒಬ್ಬ ರಾಜಕಾರಣಿ ಹಾಗೂ ಸಮಾಜ ಸೇವಕ. ಪ್ರೆಸ್‌ಮೀಟ್‌ಗೆ ಕುಳಿತುಕೊಳ್ಳುವುದಿಲ್ಲ ಎಂದು ಮಾಧ್ಯಮದ ಮುಂದೆ ಬರಲು ಹಿಂಜರಿದರು. ಆದರೆ ನ್ಯಾಯಕ್ಕಾಗಿ ಅವರನ್ನು ಮಾಧ್ಯಮಗಳ ಮುಂದೆ ಕರೆಸಿದ್ದೇವೆ ಎಂದು ಸೌಧ ವಿವರಿಸಿದರು. ದುಃಖದಿಂದಾಗಿ ಅವರಿಗೆ ಮಾಧ್ಯಮಗಳ ಮುಂದೆ ಮಾತನಾಡಲು ಸಾಧ್ಯವಾಗಲಿಲ್ಲ.
ಅಭಿಷೇಕ್ ಸಹಿತ ಹನಿಟ್ರ್ಯಾಪ್ ಕೇಸ್‌ಗಳಿಗೆ ಉಚಿತವಾಗಿ ನ್ಯಾಯ ಕೊಡಿಸುವೆ
ಹನಿಟ್ರ್ಯಾಪ್ ಜಾಲ ತುಂಬಾ ಡೊಡ್ಡಾಗಿದೆ. ಇದನ್ನು ನಿಯಂತ್ರಿಸಲು ಸರ್ಕಾರವೇ ಒಂದು ಮಸೂದೆಯನ್ನು ತರಬೇಕು. ಇತ್ತೀಚೆಗೆ ಕಾರ್ಕಳದ ಯುವಕ(ಅಭಿಷೇಕ್) ಹನಿಟ್ರ್ಯಾಪ್‌ಗೊಳಗಾಗಿ ಆತ್ಮಹತ್ಯೆ ಮಾಡಿದ್ದಾನೆ. ಮೊದಲು ಸುಲಿಗೆ ಮಾಡುತ್ತಿದ್ದರು. ಇದೀಗ ಹೆಣ್ಣಿನ ವೀಕ್‌ನೆಸ್ ಇಟ್ಟುಕೊಂಡು ಹಣ ಲೂಟಿ ಮಾಡುತ್ತಿದ್ದಾರೆ. ಮುಮ್ತಾಜ್ ಅಲಿ ಪ್ರಕರಣ ನಿಮಗೆಲ್ಲರಿಗೂ ಗೊತ್ತಿದೆ. ಇನ್ನೊಬ್ಬರು ಮುಮ್ತಾಜ್ ಅಲಿ ತರ ಆಗ್ಬಾರ್ದು. ಹಾಗಾಗಿ ಹನಿಟ್ರ್ಯಾಪ್ ಒಳಗಾದವರು ನನ್ನನ್ನು ಸಂಪರ್ಕಿಸಿದರೆ ಅವರಿಗೆ ಉಚಿತವಾಗಿ ನ್ಯಾಯ ಕೊಡಿಸುತ್ತೇನೆ. ಆತ್ಮಹತ್ಯೆಗೈದ ಕಾರ್ಕಳ ಯುವಕನ ಅಮ್ಮ ನನ್ನನ್ನು ಸಂಪರ್ಕಿಸಿದರೆ ಉಚಿತವಾಗಿ ನ್ಯಾಯ ಒದಗಿಸಿಕೊಡುತ್ತೇನೆ ಎಂದು ಸೌಧಾ ವಾಗ್ದಾನ ಮಾಡಿದರು.
ಫೋಟೋ ವಿಡಿಯೋ ಇಟ್ಟುಕೊಂಡು 40 ಲಕ್ಷ ದೋಚುವುದು ಸಣ್ಣ ವಿಷ್ಯವಿಲ್ಲ. ಅಶ್ರಫ್ ಅವರ ಜೀವರಕ್ಷಣೆಗೆ ಮನವಿ ಮಾಡಿದ್ದೇವೆ. 2010ರಿಂದ ಸಫಿಯಾ ಗ್ಯಾಂಗ್ ಹಲವರನ್ನು ಹನಿಟ್ರ್ಯಾಪ್ ಮಾಡಿದೆ. ಮಡಿಕೇರಿಯ ಸೈನಿಕರೊಬ್ಬರನ್ನೂ ಹನಿಟ್ರ್ಯಾಪ್ ಮಾಡಿದ ಬಗ್ಗೆಗೂ ಕೇಸ್ ದಾಖಲಾಗಿದೆ. ಹನಿಟ್ರ್ಯಾಪ್ ಆದವರು ಮರ್ಯಾದೆ ಹೋಗುತ್ತದೆ ಎಂದು ಹಿಂದೆ ಸರಿಯದೆ ಧೈರ್ಯದಿಂದ ಕೇಸ್ ಕೊಡಿ ಎಂದು ಸೌಧ ಧೈರ್ಯ ಹೇಳಿದರು. ಜ್ಯೂನಿಯರ್ ಅಡ್ವೊಕೇಟ್ ರಝಾಕ್ ಉಪಸ್ಥಿತರಿದ್ದರು.