ಮಂಗಳೂರು: ಅಂಗಡಿಗೆ ಹೋಗಿದ್ದ ಬಾಲಕಿ ಮೇಲೆ ಬೀದಿನಾಯಿಗಳು ದಾಳಿ ಮಾಡಿದ ಪರಿಣಾಮ ಆಕೆ ಗಂಭೀರ ಗಾಯಗೊಂಡಿರುವ ಘಟನೆ ಬುಧವಾರ(ಅ.15) ಸಂಜೆ ಮಂಗಳೂರು ಹೊರವಲಯ ಸುರತ್ಕಲ್ ಕಾನ ಮೈದಗುರಿಯಲ್ಲಿ ನಡೆದಿದೆ.
ಮೈಂದಗುರಿ ನಿವಾಸಿ ಹೈದರ್ ಅಲಿ ಅವರ ಮಗಳು ರಿದಾ ಫಾತಿಮ (9) ಗಂಭೀರ ಗಾಯಗೊಂಡ ಬಾಲಕಿ.
ರಿದಾ ಫಾತಿಮ ಸಂಜೆಯ ವೇಳೆ ಮನೆ ಬಳಿಯ ಅಂಗಡಿಗೆ ಹೋಗುತ್ತಿದ್ದಳು. ಈ ವೇಳೆ ಎಲ್ಲಿಂದಲೋ ಜಗಳ ಮಾಡಿಕೊಂಡು ಬೀದಿನಾಯಿಗಳು ಅಲ್ಲಿಗೆ ಬಂದಿವೆ. ನಾಯಿಗಳ ಜಗಳ ಕಂಡು ಬೆಚ್ಚಿಬಿದ್ದ ಬಾಲಕಿ ಮನೆಗೆ ಹಿಂದಿರುಗಿ ಓಡುವ ಭರದಲ್ಲಿ ಕೈಯ್ಯಲ್ಲಿದ್ದ ಹಣ ಕೆಳಗೆ ಬಿದ್ದಿದೆ. ಅದನ್ನು ಹೆಕ್ಕುವಷ್ಟರಲ್ಲಿ ನಾಯಿಗಳ ಹಿಂಡು ಬಾಲಕಿಯ ಮೇಲೆ ದಾಳಿ ಮಾಡಿವೆ.
ದಾಳಿಯಿಂದ ಬಾಲಕಿಯ ಕೈ, ಕಾಲಿಗೆ ಕಚ್ಚಿದ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಬಾಲಕಿಯ ಬೊಬ್ಬೆ ಕೇಳಿ ಸ್ಥಳಕ್ಕೆ ಬಂದ ಸಾರ್ವಜನಿಕರು ನಾಯಿಗಳ ಬಾಯಿಯಿಂದ ಬಾಲಕಿಯನ್ನು ರಕ್ಷಿಸಿ ಸುರತ್ಕಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಬಳಿಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಬಳಿಕ ಅಲ್ಲಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.