ಕಾಸರಗೋಡು: ಕರ್ನಾಟಕ–ಕೇರಳ ಗಡಿಯ ನೈಸರ್ಗಿಕ ಸೌಂದರ್ಯದಿಂದ ಕೂಡಿದ ಪವಿತ್ರ ಸ್ಥಳ ಮಿಂಚಿಪದವು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಈ ವರ್ಷವೂ ತುಲಾ ಸಂಕ್ರಮಣದ ಸಂದರ್ಭದಲ್ಲಿ ಕಾವೇರಿ ತೀರ್ಥೋದ್ಭವ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
ಅ.17 ರಂದು ತೀರ್ಥೋದ್ಭವ:
ಅಕ್ಟೋಬರ್ 17, 2025ರ ಶುಕ್ರವಾರ ಅಪರಾಹ್ನ 1.46ಕ್ಕೆ ಪವಿತ್ರ ಕಾವೇರಿ ತೀರ್ಥೋದ್ಭವವು ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿ ಮತ್ತು ಬ್ರಹ್ಮಶ್ರೀ ರವೀಶ ತಂತ್ರಿಗಳ ನೇತೃತ್ವದಲ್ಲಿ, ಬೇವಿಂಜೆ ಕಕ್ಕಿಲ್ಲಾಯ ಕುಟುಂಬದ ಸಹಭಾಗಿತ್ವದಲ್ಲಿ ಹಾಗೂ ಸಾವಿರಾರು ಭಕ್ತರ ಸಾನ್ನಿಧ್ಯದಲ್ಲಿ ನೆರವೇರಲಿದೆ. ತೀರ್ಥೋದ್ಭವನ ನಂತರ ಕಾವೇರಿಯಮ್ಮನ ಶಿಲಾಮಯ ಮೂರ್ತಿಗೆ ತೀರ್ಥಾಭಿಷೇಕ, ಕುಂಕುಮಾರ್ಚನೆ ಹಾಗೂ ಮಹಾಲಿಂಗೇಶ್ವರನಿಗೆ ಜಲಾಭಿಷೇಕ ಮತ್ತು ಮಹಾಪೂಜೆ ನಡೆಯಲಿದೆ ಎಂದು ಆಯೋಜಕರು ಮಂಗಳೂರಿನ ಪತ್ರಿಕಾಭವನದಲ್ಲಿ ಮಾಹಿತಿ ನೀಡಿದ್ದಾರೆ.
ಮುಂದಿನ ದಿನವಾದ ಅಕ್ಟೋಬರ್ 18 ರಂದು ಶ್ರೀ ಕ್ಷೇತ್ರದಲ್ಲಿ ಗಣಪತಿ ಪೂಜೆ, ಕಾವೇರಿಯಮ್ಮನಿಗೆ ವಿಶೇಷ ಕುಂಕುಮಾರ್ಚನೆ, ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಏಕಾದಶ ರುದ್ರಾಭಿಷೇಕ, ನವಾನ್ನ ಸಮರ್ಪಣೆ ಹಾಗೂ ಮಹಾಪೂಜೆ ನಡೆಯಲಿದೆ. ನಂತರ ಪ್ರಸಾದ ವಿತರಣೆ ಮತ್ತು ಮಹಾ ಅನ್ನಸಂತರ್ಪಣೆ ನಡೆಯಲಿದ್ದು, ಕ್ಷೇತ್ರದಲ್ಲಿ ಭಕ್ತರ ಭಾರೀ ಭಾಗವಹಿಸುವಿಕೆ ನಿರೀಕ್ಷಿಸಲಾಗಿದೆ.
ಅದೇ ದಿನ ಪೂರ್ವಾಹ್ನ 10 ಗಂಟೆಗೆ ಕ್ಷೇತ್ರ ಜೀರ್ಣೋದ್ಧಾರದ ಅಂಗವಾಗಿ ಸಭಾ ಕಾರ್ಯಕ್ರಮ ಹಾಗೂ ಭಾಗ್ಯನಿಧಿ ಯೋಜನೆಯ ಡ್ರಾ ಕಾರ್ಯಕ್ರಮವೂ ನಡೆಯಲಿದೆ.
ಅತಿಥಿಗಳಾಗಿ ಭಾಗವಹಿಸುವವರು:
ಕಾರ್ಯಕ್ರಮದಲ್ಲಿ ಧರ್ಮದರ್ಶಿ ಶಾಸ್ತಾರ ಶ್ರೀಯುತ ಸತೀಶ್ ಕಟಾವು (ವಿಷ್ಣುಮೂರ್ತಿ ದೇವಸ್ಥಾನ, ಪಡುಮಲೆ), ನಾರಾಯಣ ರೈ ಕಟ್ಟೆ (ಪಡುಮಲೆ), ನ್ಯಾಯವಾದಿಗಳು ಸಂಕಪ್ಪ ಪೂಜಾರಿ (ಉಡುಪಿ), ಗೋಪಾಲಕೃಷ್ಣ ರಾವ್ (ಕಾರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರು), ಉಧ್ಯಮಿ ಮಧುಸೂಧನ್ ಆಯರ್ (ಮಂಗಳೂರು), ದಾಮೋದರ ಎಂ. (ಕಾರ್ಯಧ್ಯಕ್ಷರು, ಜೀರ್ಣೋದ್ಧಾರ ಬ್ರಹ್ಮಕಲಶ ಸಮಿತಿ), ಬೇವಿಂಜೆ ಕಕ್ಕಿಲ್ಲಾಯ ಕುಟುಂಬಸ್ಥರು ಮತ್ತು ಧಾರ್ಮಿಕ ಮುಂದಾಳು ನಾರಾಯಣ ಕೇಕಡ್ಕ (ಸುಳ್ಯ) ಇವರು ಭಾಗವಹಿಸಲಿದ್ದಾರೆ.
ಮಿಂಚಿಪದವು ಶ್ರೀ ಕ್ಷೇತ್ರವು ಪುರಾಣ ಪ್ರಸಿದ್ಧ ಸ್ಥಳವಾಗಿದ್ದು, ಇಲ್ಲಿ ಉಗಮಿಸುವ ಕಾವೇರಿ ತೀರ್ಥವು ಕೊಡಗು ಜಿಲ್ಲೆಯ ತಲಕಾವೇರಿಯ ತೀರ್ಥದಂತೆಯೇ ಪವಿತ್ರವೆಂದು ನಂಬಲಾಗುತ್ತದೆ. ಪ್ರತಿವರ್ಷ ಸಾವಿರಾರು ಭಕ್ತರು ಈ ಕ್ಷಣದ ಸಾಕ್ಷಿಯಾಗಲು ಕ್ಷೇತ್ರಕ್ಕೆ ಆಗಮಿಸುತ್ತಾರೆ.
ಖರಾಸುರ ಸ್ಥಾಪಿಸಿದ ಮಹಾಲಿಂಗೇಶ್ವರ ಕ್ಷೇತ್ರ
ಕರ್ನಾಟಕ – ಕೇರಳ ಗಡಿ ಪ್ರದೇಶದ ಕಾಸರಗೋಡು ತಾಲೂಕು, ಕಾಸರಗೋಡು- ಜಾಲ್ಲೂರು – ಸುಳ್ಯ ರಾಜ್ಯ ಹೆದ್ದಾರಿಯಲ್ಲಿ ಸಿಗುವ ಗಾಳಿಮುಖ ಎಂಬಲ್ಲಿಂದ ಉತ್ತರಕ್ಕೆ ರಸ್ತೆಯಲ್ಲಿ ಸುಮಾರು 2 ಕಿ. ಮೀ ಸಾಗಿದಾಗ ಉನ್ನತ ಶಿಖರದ ಮೇಲೆ ಕಂಡು ಬರುವ ನೈಸರ್ಗಿಕವಾಗಿ ಸೌಂದರ್ಯದಿಂದ ಕೂಡಿದ ವಿಶಾಲವಾದ, ಸಮತಟ್ಟಾದ ರಮಣೀಯ ಬಯಲು ಪ್ರದೇಶವೇ ಮಿಂಚಿಪದವು. ಇಲ್ಲಿ ಶಿವನ ಸಾನಿಧ್ಯವಿದ್ದು ಆ ಕ್ಷೇತ್ರವೇ ಮಿಂಚಿಪದವು ಶ್ರೀ ಮಹಾಲಿಂಗೇಶ್ವರ ಕ್ಷೇತ್ರ. ಈ ವಿಗ್ರಹವನ್ನು ಖರಾಸುರ ಸ್ಥಾಪಿಸಿದ ಎಂದು ಐತಿಹ್ಯ ಹೇಳುತ್ತದೆ. ಮಹರ್ಷಿ ಮುಚುಕುಂದ ಎಂಬ ಮಹಾಮುನಿಯು ತಪಸ್ಸು ಗೈದುದರಿಂದ ಈ ಊರಿಗೆ ಮಿಂಚಿಪದವು ಎಂಬ ಹೆಸರು ಬಂತು. ಈ ಕ್ಷೇತ್ರಕ್ಕೆ ಹೊಂದಿಕೊಂಡಿರುವಂತೆ ಪೂರ್ವ ದಿಕ್ಕಿನಲ್ಲಿ ನೈಸರ್ಗಿಕವಾಗಿ ಗುಹಾದ್ವಾರದ ಮೂಲಕ ನಿರಂತರವಾಗಿ ಪ್ರವಹಿಸುವ ಮಾತೃ ಸ್ವರೂಪಿಣಿಯಾದ ಮಾತೆಯ ಸನ್ನಿಧಾನವೇ ಕಾವೇರಿಯಮ್ಮನ ಪುಷ್ಕರಿಣಿ. ಕೊಡಗು ಜಿಲ್ಲೆಯ ಭಾಗಮಂಡಲದ ಬ್ರಹ್ಮಗಿರಿ ತಪ್ಪಲಿನಲ್ಲಿರುವ ಕಾವೇರಿ ತೀರ್ಥಕ್ಕೂ ಇದಕ್ಕೂ ಅವಿನಾಭಾವ ಸಂಬಂಧ ಹಾಗೂ ಸಾದೃಶ್ಯವಿದೆ. ಈ ಕಾವೇರಿ ತೀರ್ಥವನ್ನು ಮಹರ್ಷಿ ಪರುಶುರಾಮ ನಿರ್ಮಿಸಿದನೆಂದು ಪ್ರತೀತಿ. ಈ ಸಾನಿಧ್ಯವು ಕುಂಬಳೆ ಸೀಮೆಯ “ತಲಕಾವೇರಿ” ಎಂದೇ ಪ್ರಸಿದ್ಧವಾಗಿದೆ.