ಅ.19ರಂದು: ದಕ್ಷಿಣ ಕನ್ನಡ ಜಿಲ್ಲಾ ಕುಪ್ಮಾ ಸಮಿತಿಯ ಪದಗ್ರಹಣ ಸಮಾರಂಭ

ಮಂಗಳೂರು: ರಾಜ್ಯದ ಪದವಿ ಪೂರ್ವ ಖಾಸಗಿ ಅನುದಾನರಹಿತ ಕಾಲೇಜುಗಳ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಕ್ರಿಯ ಪಾತ್ರವಹಿಸುತ್ತಿರುವ ಕುಪ್ಮಾ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಪದಗ್ರಹಣ ಕಾರ್ಯಕ್ರಮ ಅಕ್ಟೋಬರ್ 19ರಂದು ಮಂಗಳೂರಿನ ಕೊಡಿಯಾಲ್ ಬೈಲ್‌ನ ಹೋಟೆಲ್ ಓಶಿಯನ್ ಪರ್ಲ್‌ನ ಪೆಸಿಫಿಕ್ 04 ಹಾಲ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಜಿಲ್ಲಾ ನಿಯೋಜಿತ ಅಧ್ಯಕ್ಷ ಯುವರಾಜ್ ಜೈನ್ ಹೇಳಿದರು.

ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, 2022ರ ಡಿಸೆಂಬರ್ 9ರಂದು ಪ್ರಾರಂಭವಾದ ಕುಪ್ಮಾ ಸಂಘಟನೆಯು ಕಳೆದ ಮೂರು ವರ್ಷಗಳಲ್ಲಿ ಪದವಿ ಪೂರ್ವ ಶಿಕ್ಷಣ ಕ್ಷೇತ್ರದ ಹಲವಾರು ಸಮಸ್ಯೆಗಳನ್ನು ಸರಕಾರದೊಂದಿಗೆ ಚರ್ಚಿಸಿ ಪರಿಹರಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು. ದಕ್ಷಿಣ ಕನ್ನಡದಲ್ಲಿ ಆರಂಭಗೊಂಡ ಸಂಘಟನೆ ಈಗ ರಾಜ್ಯದಾದ್ಯಂತ ತನ್ನ ಚಟುವಟಿಕೆಯನ್ನು ವಿಸ್ತರಿಸಿದೆ ಎಂದು ಅವರು ತಿಳಿಸಿದರು.

“ರಾಜ್ಯ ಕುಪ್ಮಾ ಸಮಿತಿಯ ನಿರ್ದೇಶನದಂತೆ ಈಗಾಗಲೇ ಬೆಂಗಳೂರು, ಮೈಸೂರು, ಹಾವೇರಿ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕುಪ್ಮಾ ಜಿಲ್ಲಾ ಸಮಿತಿಗಳನ್ನು ರಚಿಸಲಾಗಿದೆ. ಇದೇ ಮಾದರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯೂ ಈಗ ರಚನೆಗೊಂಡು ಪದಗ್ರಹಣಕ್ಕೆ ಸಜ್ಜಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಭೋಜೆ ಗೌಡ, ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ರಾಜೇಶ್ವರಿ ಹೆಚ್.ಹೆಚ್., ರಾಜ್ಯ ಕುಷ್ಮಾ ಸಮಿತಿಯ ಗೌರವಾಧ್ಯಕ್ಷರು ಕೆ. ರಾಧಾಕೃಷ್ಣ ಶೆಣೈ, ಡಾ. ಎಂ.ಬಿ. ಪುರಾಣಿಕ್, ಡಾ. ಕೆ.ಸಿ. ನಾಯಕ್ ಹಾಗೂ ಕಾರ್ಯದರ್ಶಿ ಪ್ರೊ. ನರೇಂದ್ರ ಎಲ್. ನಾಯಕ್ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಕುಷ್ಮಾ ಸಮಿತಿಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ವಹಿಸಿಕೊಳ್ಳಲಿದ್ದಾರೆ.

ಬೆಳಿಗ್ಗೆ 10.30ಕ್ಕೆ ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು, ಪದಗ್ರಹಣ ಮತ್ತು ಉದ್ಘಾಟನಾ ಕಾರ್ಯಕ್ರಮವು ಬೆಳಿಗ್ಗೆ 11ರಿಂದ ಮಧ್ಯಾಹ್ನ 12.30ರವರೆಗೆ ನಡೆಯಲಿದೆ. ನಂತರ ಸಹಭೋಜನ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸುವವರು email@kupma.org ಗೆ ಇಮೇಲ್ ಮೂಲಕ ಖಚಿತಪಡಿಸಬಹುದು ಅಥವಾ ಕರುಣಾಕರ ಬಳ್ಳೂರು (9916885919) ಅವರನ್ನು ಸಂಪರ್ಕಿಸಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ಮಂಜುನಾಥ್ ಎಸ್. ರೇವಣ್ಕರ್ (ಎಕ್ಸ್‌ಲೆಂಟ್ ಸಮೂಹ ಶಿಕ್ಷಣ ಸಂಸ್ಥೆ, ಮೂಡಬಿದರೆ), ಅಶ್ವಿನ್ ಶೆಟ್ಟಿ (ಸೂರಜ್ ಶಿಕ್ಷಣ ಸಮೂಹ, ಮೂಡಿಪು), ರವೀಂದ್ರ ಪಿ (ವಿವೇಕಾನಂದ ಪಿ.ಯು. ಕಾಲೇಜು, ಪುತ್ತೂರು), ರಮೇಶ್ ಕೆ (ಶಕ್ತಿ ಸಮೂಹ ಶಿಕ್ಷಣ ಸಂಸ್ಥೆ, ಮಂಗಳೂರು) ಹಾಗೂ ಕರುಣಾಕರ ಬಳ್ಳೂರು (ಕುಷ್ಮಾ ಸಂಯೋಜಕ, ಎಕ್ಸ್‌ಪರ್ಟ್ ಪಿ.ಯು. ಕಾಲೇಜು, ಮಂಗಳೂರು) ಉಪಸ್ಥಿತರಿದ್ದರು.

✅Business Offer: TUZHAR ಮೂಲಕ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. ಕಡಿಮೆ ಹೂಡಿಕೆ, ಕಚ್ಛಾವಸ್ತು ಪೂರೈಕೆ, ಮಾರುಕಟ್ಟೆ ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಸುಗಂಧ ದ್ರವ್ಯ ವ್ಯಾಪಾರಿಗಳೊಂದಿಗೆ ಸುಗಂಧ ದ್ರವ್ಯ ವ್ಯವಹಾರ ಪ್ರಾರಂಭಿಸಿ ಸ್ವಾವಲಂಬಿಗಳಾಗಿ 📲 +918088947906

error: Content is protected !!