ಮಂಗಳೂರು: ಪಿ.ಎ. ತಾಂತ್ರಿಕ ಮಹಾವಿದ್ಯಾಲಯ, ನಡುಪದವು ಮಂಗಳೂರಿನಲ್ಲಿ “IEEE ಡಿಸ್ಕವರ್ 25” ಅಂತರಾಷ್ಟ್ರೀಯ ಸಮ್ಮೇಳನ ಅಕ್ಟೋಬರ್ 17 ಮತ್ತು 18, 2025 ರಂದು ನಡೆಯಲಿದೆ. IEEE ಮಂಗಳೂರು ಉಪವಿಭಾಗದ ವತಿಯಿಂದ ಆಯೋಜಿಸಲ್ಪಡುವ ಇದು 9ನೇ ಆವೃತ್ತಿಯ ಸಮ್ಮೇಳನವಾಗಿದ್ದು, ಡಿಸ್ಟ್ರಿಬ್ಯೂಟೆಡ್ ಕಂಪ್ಯೂಟಿಂಗ್, ವಿ.ಎಲ್.ಎಸ್.ಐ, ಎಲೆಕ್ಟ್ರಿಕಲ್ ಸರ್ಕ್ಯೂಟ್ಸ್ ಮತ್ತು ರೋಬೋಟಿಕ್ಸ್ ವಿಷಯಗಳನ್ನು ಒಳಗೊಂಡಿದೆ ಎಂದು ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರಮೀಸ್ ಎಂ.ಕೆ. ಅವರು ಹೇಳಿದ್ದಾರೆ.
ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, “ಈ ಸಮ್ಮೇಳನವು ಸಂಶೋಧಕರು, ಶೈಕ್ಷಣಿಕ ತಜ್ಞರು ಮತ್ತು ಕೈಗಾರಿಕಾ ವಲಯದ ಪರಿಣಿತರಿಗೆ ಹೊಸ ತಂತ್ರಜ್ಞಾನ, ಆವಿಷ್ಕಾರಗಳು ಮತ್ತು ಸಂಶೋಧನಾ ವಿಚಾರಗಳನ್ನು ಹಂಚಿಕೊಳ್ಳಲು ಹಾಗೂ ಪರಸ್ಪರ ಚರ್ಚಿಸಲು ಅತ್ಯುತ್ತಮ ವೇದಿಕೆಯಾಗಿದೆ. ಈ ಬಾರಿ ಒಟ್ಟು 526 ಪ್ರಬಂಧಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ 136 ಪ್ರಬಂಧಗಳು ಮಂಡನೆಗಾಗಿ ಆಯ್ಕೆಗೊಂಡಿವೆ. ಮಂಡಿಸಲ್ಪಡುವ ಎಲ್ಲ ಪ್ರಬಂಧಗಳು IEEE Conference Publication Program Digital Libraryಯಲ್ಲಿ ಪ್ರಕಟಣೆಗಾಗಿ ಸಲ್ಲಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಅಕ್ಟೋಬರ್ 17ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಇನ್ಫೋಸಿಸ್‌ನ ಉಪಾಧ್ಯಕ್ಷ ಹಾಗೂ ಡೆಲಿವರಿ ರಿಸ್ಕ್ ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥ ಶ್ರೀ ವಾಸುದೇವ ಕಾಮತ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ NIT ಕ್ಯಾಲಿಕಟ್‌ನ ಪ್ರೊಫೆಸರ್ ಹಾಗೂ IEEE ರೀಜನಲ್ 10 ಏಷ್ಯಾ ಪೆಸಿಫಿಕ್ ನಿರ್ದೇಶಕ ಡಾ. ಸಮೀರ್ ಎಸ್.ಎಮ್. ಸಮಾರೋಪ ಭಾಷಣ ಮಾಡಲಿದ್ದಾರೆ. CDACನ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಸುಧರ್ಶನ ಅವರು ಪ್ರಾಸ್ತಾವಿಕ ಉಪನ್ಯಾಸ ನೀಡಲಿದ್ದಾರೆ.
ಸಮ್ಮೇಳನಕ್ಕೆ ಪಿ.ಎ. ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ರಮೀಸ್ ಎಂ.ಕೆ. ಹಾಗೂ ಜೆಎನ್‌ಎನ್‌ಸಿಇ ಶಿವಮೊಗ್ಗ ಕಾಲೇಜಿನ ಡೀನ್ ಡಾ. ಎಸ್.ವಿ. ಸತ್ಯನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ. ಉಪ ಪ್ರಾಂಶುಪಾಲರಾದ ಡಾ. ಶರ್ಮಿಳಾ ಕುಮಾರಿ ಎಂ. ಮತ್ತು ಡಾ. ಮೊಹಮ್ಮದ್ ಜಾಕಿರ್ ಬೆಳ್ಳಾರಿ ಸಮ್ಮೇಳನದ ಮುಖ್ಯ ಸಂಘಟಕರಾಗಿದ್ದಾರೆ.

ಈ ಸಮ್ಮೇಳನವು ತಾಂತ್ರಿಕ ಕ್ಷೇತ್ರದ ನವೀನ ಸಂಶೋಧನೆ, ಪ್ರಾಯೋಗಿಕ ಅನ್ವಯ ಮತ್ತು ತಂತ್ರಜ್ಞಾನ ವಿನಿಮಯದ ಮೂಲಕ ಯುವ ಸಂಶೋಧಕರಿಗೆ ಪ್ರೇರಣೆ ನೀಡಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಡಾ. ಮೊಹಮ್ಮದ್ ಜಾಕಿರ್ (ವಿಭಾಗಾಧ್ಯಕ್ಷರು – ಎಐಎಂಎಲ್, ಪಿ.ಎ. ಇಂಜಿನಿಯರಿಂಗ್ ಕಾಲೇಜು), ಡಾ. ಸಯ್ಯದ್ ಅಮೀನ್ ಅಹಮ್ಮದ್ (ಡೀನ್ – ವಿದ್ಯಾರ್ಥಿ ವ್ಯವಹಾರಗಳು, ಪಿ.ಎ. ಎಜ್ಯುಕೇಷನಲ್ ಟ್ರಸ್ಟ್), ಹಾಗೂ ಡಾ. ಹರಿವಿನೋದ್ ಎನ್. (ಜಂಟಿ ಕಾರ್ಯದರ್ಶಿ, IEEE ಮಂಗಳೂರು ಉಪವಿಭಾಗ) ಉಪಸ್ಥಿತರಿದ್ದರು.