ಮತ್ತೆ ಭುಗಿಲೆದ್ದ ಹಿಜಾಬ್‌ ವಿವಾದ: ಹಿಜಾಬ್‌ ಹಾಕಲು ಬಿಡದಿದ್ದರೆ ಶಾಲೆಯೇ ಬೇಡ ಎಂದ ಬಾಲಕಿ!

ತಿರುವನಂತಪುರಂ: ಕರ್ನಾಟಕದ ನಂತರ ಈಗ ಕೇರಳದಲ್ಲೂ ಹಿಜಾಬ್‌ ವಿವಾದ ಭುಗಿಲೆದ್ದಿದೆ. ಎರ್ನಾಕುಲಂ ಜಿಲ್ಲೆಯ ಪಲ್ಲೂರುತಿಯ ಸೇಂಟ್ ರೀಟಾ ಪಬ್ಲಿಕ್ ಶಾಲೆ, ಹಿಜಾಬ್ ಧರಿಸಿದ 8ನೇ ತರಗತಿಯ ವಿದ್ಯಾರ್ಥಿನಿಗೆ ತರಗತಿಗೆ ಪ್ರವೇಶ ನಿರಾಕರಿಸಿದ ಘಟನೆ ರಾಜ್ಯದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಶಾಲಾ ಆಡಳಿತದ ಪ್ರಕಾರ, ಹಿಜಾಬ್ ಶಾಲೆಯ ಡ್ರೆಸ್ ಕೋಡ್ ಉಲ್ಲಂಘನೆ ಆಗಿದ್ದರಿಂದ ವಿದ್ಯಾರ್ಥಿನಿಗೆ ಅದನ್ನು ತೆಗೆದುಹಾಕುವಂತೆ ಸೂಚಿಸಲಾಯಿತು. ಆದರೆ ಬಾಲಕಿ ಹೇಳುವಂತೆ – “ನನಗೆ ಹಿಜಾಬ್ ಧರಿಸಲು ಅವಕಾಶ ನೀಡಲಿಲ್ಲ. ತರಗತಿಯ ಬಾಗಿಲಲ್ಲೇ ಅದನ್ನು ತೆಗೆಯಲು ಹೇಳಿದರು. ಶಿಕ್ಷಕರು ಅಸಭ್ಯವಾಗಿ ವರ್ತಿಸಿದರು. ಹೀಗಾಗಿ ನಾನು ಇಲ್ಲಿ ಓದುವುದಿಲ್ಲ,” ಎಂದು ಆಕೆ ಹೇಳಿದ್ದಾಳೆ.

ಈ ಘಟನೆಯ ಬಳಿಕ ವಿದ್ಯಾರ್ಥಿನಿಯ ಪೋಷಕರು ಶಾಲಾ ಆಡಳಿತದ ವಿರುದ್ಧ ವಾಗ್ವಾದ ನಡೆಸಿದರು. ಪರಿಸ್ಥಿತಿ ಇನ್ನಷ್ಟು ಗಂಭೀರಗೊಂಡಿದ್ದು, SDPI (Social Democratic Party of India) ಕಾರ್ಯಕರ್ತರು ಘಟನೆಯಲ್ಲಿ ತಲೆಹಾಕಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಶಾಲೆಯು ಇತರ ಪೋಷಕರಿಗೆ ಬರೆದ ಪತ್ರದಲ್ಲಿ – “ಎಲ್ಲಾ ವಿದ್ಯಾರ್ಥಿಗಳು ಸಮಾನ ಉಡುಪಿನಲ್ಲಿ ಇರಬೇಕು ಎಂಬ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ,” ಎಂದು ಸ್ಪಷ್ಟಪಡಿಸಿದೆ.

ಶಾಲೆಯ ಪ್ರಾಂಶುಪಾಲ ಸಿಸ್ಟರ್ ಹೆಲೆನಾ ವಿವರಿಸಿದಂತೆ, “ಪ್ರವೇಶದ ಸಮಯದಲ್ಲೇ ಪೋಷಕರಿಗೆ ಡ್ರೆಸ್ ಕೋಡ್ ಬಗ್ಗೆ ತಿಳಿಸಲಾಗಿತ್ತು. ವಿದ್ಯಾರ್ಥಿನಿ ನಾಲ್ಕು ತಿಂಗಳ ಕಾಲ ನಿಯಮ ಪಾಲಿಸಿದ್ದರು. ಆದರೆ ನಂತರ ಏಕಾಏಕಿ ಹಿಜಾಬ್ ಧರಿಸಿ ಬಂದರು. ನಾವು ಶಾಂತಿಯುತವಾಗಿ ಮನವಿ ಮಾಡಿದ್ದೇವೆ,” ಎಂದರು.

ಘಟನೆ ಬಳಿಕ ಶಾಲಾ ಆವರಣದಲ್ಲಿ ವಾಗ್ವಾದ ತೀವ್ರಗೊಂಡಿದ್ದು, ಸ್ಥಳೀಯ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಲು ಸ್ಥಳಕ್ಕಾಗಮಿಸಿದ್ದಾರೆ.

“ಧಾರ್ಮಿಕ ಅತಿರೇಕ ರಾಜ್ಯದ ಜಾತ್ಯತೀತ ಬಣ್ಣಕ್ಕೆ ಹಾನಿ ಮಾಡುತ್ತಿದೆ. ಇದು ಕೇರಳದ ಶಿಕ್ಷಣ ವ್ಯವಸ್ಥೆಯ ಮೇಲೆ ಕಪ್ಪು ಚುಕ್ಕೆ ಇಡುತ್ತಿದೆ ಎಂದು ಬಿಜೆಪಿ ಎಸ್‌ಡಿಪಿಐ ವಿರುದ್ಧ ಆರೋಪಿಸಿದೆ.

error: Content is protected !!