ರಾಯಚೂರು: ನೂತನ ಹಿಂದೂ ಹೊಸ ಪಕ್ಷ ಕಟ್ಟಲು ಮುಂದಾಗಿರುವ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಶಿವ ಸೇನಾ ಶಿಂಧೆ ಬಣದಿಂದ ದೊಡ್ಡ ಆಹ್ವಾನ ಬಂದಿದೆ. ಯತ್ನಾಳ್ ಅವರನ್ನು ಪಕ್ಷಕ್ಕೆ ಕರೆತಂದು ರಾಜ್ಯದಲ್ಲಿ ಶಿವಸೇನೆ ಶಿಂಧೆ ಬಣವನ್ನು ಗಟ್ಟಿಗೊಳಿಸುವುದು ಆ ಪಕ್ಷದ ಮುಖಂಡರ ದೂರಾಲೋಚನೆ. ಯತ್ನಾಳರು ಶಿವಸೇನಾ ಪಕ್ಷಕ್ಕೆ ಸೇರುತ್ತೇನೆ ಎಂದರೆ, ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸುತ್ತೇವೆ. ಅವರು ಹಿಂದುತ್ವದ ಕೆಲಸಕ್ಕೆ ಬರುವುದಾದರೆ, ನಾವು ಕೈಜೋಡಿಸಲು ಸಿದ್ಧರಾಗಿದ್ದೇವೆ ಎಂದು ಶಿವಸೇನಾ ಶಿಂಧೆ ಬಣದ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.
ಅಫಜಲಪುರದ ಕಾರ್ಯಕ್ರಮವೊಂದರಲ್ಲಿ ಯತ್ನಾಳ್ ಜೊತೆ ಒಂದೇ ವೇದಿಕೆ ಹಂಚಿಕೊಂಡಿದ್ದೇನೆ ಎಂದು ಹೇಳಿದ ಆಂದೋಲ ಸಿದ್ದಲಿಂಗ ಸ್ವಾಮೀಜಿ, ಆ ಸಂದರ್ಭದಲ್ಲಿ ಚುನಾವಣಾ ಚರ್ಚೆ ಆಗಲಿಲ್ಲ, ಆದರೆ ಮುಂದಿನ ದಿನಗಳಲ್ಲಿ ಮಾತುಕತೆಗೆ ಅವಕಾಶ ಇದೆ. ಹಿಂದುತ್ವದ ಸರ್ಕಾರ ತರಬೇಕೆಂಬುದು ನಮ್ಮ ಉದ್ದೇಶ. ಇನ್ನೂ ಎರಡು ವರ್ಷ ಕಾಲಾವಕಾಶ ಇರುವುದರಿಂದ, ರಾಜಕೀಯ ಹೊಂದಾಣಿಕೆ ಬಗ್ಗೆ ಮಾತುಕತೆ ಮಾಡಲು ಸಮಯವಿದೆ ಎಂದು ಅವರು ತಿಳಿಸಿದರು. ಮಹಾರಾಷ್ಟ್ರದಲ್ಲಿ ಶಿವಸೇನಾ ಎನ್‌ಡಿಎ ಮೈತ್ರಿಕೂಟದಲ್ಲಿರುವಂತೆಯೇ, ಕರ್ನಾಟಕದಲ್ಲಿಯೂ ಹೈಕಮಾಂಡ್ ಸೂಚನೆ ಮೇರೆಗೆ ಕಾರ್ಯನಿರ್ವಹಿಸಲಾಗುವುದು ಎಂದರು.
ಪ್ರಸ್ತುತ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಕೆಲಸ ಮಾಡುತ್ತಿದೆ. ಈ ಸರ್ಕಾರ ಕೆಳಗಿಸಲು ಬೇಕಾದ ಎಲ್ಲ ಕ್ರಮ ಕೈಗೊಳ್ಳುತ್ತೇವೆ. ಹಿಂದೂ ಮತಗಳು ವಿಭಜನೆಯಾಗದಂತೆ ಒಗ್ಗೂಡಿಸಲು ನಾವು ಬದ್ಧ ಎಂದೂ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಶಿವಸೇನೆ ಶಿಂಧೆ ಬಣ ಬಿಜೆಪಿಯ ಮಿತ್ರಪಕ್ಷವಾಗಿದೆ. ಮಹಾರಾಷ್ಟ್ರದಲ್ಲಿ ಅವರೆಡೂ ಜಂಟಿಯಾಗಿ ಸರ್ಕಾರ ನಡೆಸುತ್ತಿದೆ. ಕರ್ನಾಟಕದಲ್ಲಿಯೂ ಶಿವಸೇನೆಯನ್ನು ಗಟ್ಟಿಗೊಳಿಸಿ ಬಿಜೆಪಿಗೆ ತೊಂದರೆಯಾಗದಂತೆ ಇತ್ತ ಯತ್ನಾಳರಿಗೂ ಸಮಸ್ಯೆಯಾಗದಂತೆ, ಹಿಂದೂ ಮತಗಳು ವಿಭಜನೆಯಾಗದಂತೆ ಹೊಂದಾಣಿಕೆ ನಡೆಸಿ ಸರ್ಕಾರ ನಡೆಸುವುದು ಶಿವಸೇನೆಯ ಮಾಸ್ಟರ್ ಪ್ಲ್ಯಾನ್ ಆಗಿದೆ. ಅದಕ್ಕೆ ಪೂರಕ ಎಂಬಂತೆ ಬಸನಗೌಡ ಯತ್ನಾಳರ ಜೊತೆ ರಾಜ್ಯವ್ಯಾಪಿ ಹಿಂದೂ ಕಾರ್ಯಕರ್ತರ ದಂಡೇ ಇದೆ. ಅವರು ಹೋದಲ್ಲಿ ಬಂದಲ್ಲಿ ಸಾವಿರಾರು ಕಾರ್ಯಕರ್ತರು ಗುಂಪುಗೂಡುತ್ತಿದ್ದಾರೆ. ಇದನ್ನೇ ಪ್ಲಸ್ ಆಗಿಟ್ಟುಕೊಂಡಿರುವ ಶಿವಸೇನೆ ಶಿಂಧೆ ಬಣ ಯತ್ನಾಳರನ್ನು ಮುಂದಿಟ್ಟು ಶಿವಸೇನೆಯನ್ನು ಗಟ್ಟಿಗೊಳಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.