139 ಕಿರುತೆರೆ ಕಲಾವಿದರಿಗೆ ಸೈಟ್ ಕೊಡಿಸುವುದಾಗಿ ವಂಚನೆ: ಐವರ ಮೇಲೆ ಎಫ್ಐಆರ್

ಬೆಂಗಳೂರು: ಬೆಂಗಳೂರಿನಲ್ಲಿ ಕಿರುತೆರೆ ನಟ–ನಟಿಯರಿಗೆ ಸೈಟ್ ಕೊಡಿಸುವ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ನಡೆದಿದೆ. ಸೈಟ್ ಹೆಸರಿನಲ್ಲಿ ಹಣ ಸಂಗ್ರಹಿಸಿ ನಕಲಿ ಲೇಔಟ್ ಪ್ಲಾನ್ ಹಾಗೂ ದಾಖಲಾತಿ ಸೃಷ್ಟಿಸಿ ನಟ-ನಟಿಯರನ್ನು ವಂಚಿಸಲಾಗಿದೆ. ಬಿಲ್ಡರ್ ಭಗೀರಥ ಹಾಗೂ ಸಂಜೀವ್ ತಗಡೂರು ಸೇರಿದಂತೆ ಐವರ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.


ಬರೋಬ್ಬರಿ 139 ಕಿರುತೆರೆ ಕಲಾವಿದರನ್ನು ಈ ಮೋಸದ ಜಾಲಕ್ಕೆ ಸಿಕ್ಕಿಸಲಾಗಿದೆ. ಸೈಟ್ ಕೊಡಿಸುತ್ತೇನೆಂದು ಹೇಳಿದ ಬಿಲ್ಡರ್ ಭಗೀರಥ ಹಾಗೂ ಸಂಜೀವ್ ತಗಡೂರು ಅವರನ್ನು ನಂಬಿದ ಕಲಾವಿದರೀಗ ಮೋಸ ಹೋಗಿದ್ದಾರೆ. ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸದಸ್ಯೆ ಭಾವನ ಬೆಳಗೆರೆಯವರು ಕೂಡ ಈ ಜಾಲಕ್ಕೆ ಸಿಲುಕಿದ್ದು, ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುಮಾರು 139 ಕಿರುತೆರೆ ಕಲಾವಿದರಿಂದ ಹಣ ಸಂಗ್ರಹಿಸಿ ವಂಚನೆ ಮಾಡಿದ ಆರೋಪ ಎದುರಾಗಿದೆ. ಆರೋಪಿಗಳಾದ ಭಗೀರಥ, ಸಂಜೀವ್ ತಗಡೂರು, ಗುರುಪ್ರಸಾದ್, ರವೀಂದ್ರ ಮತ್ತು ಉಮಾಕಾಂತ್ ವಿರುದ್ಧ ಪ್ರಕರಣ ದಾಖಲಾಗಿದೆ.

2015ರಲ್ಲಿ ಸಂಜೀವ್ ತಗಡೂರು ಕೆಟಿವಿಎ ಸೈಟ್ ಸಮಿತಿಯ ಸದಸ್ಯರಾಗಿದ್ದು, ಬಿಲ್ಡರ್ ಜೊತೆಗೆ ತಾವರೆಕೆರೆ ಬಳಿ ಸೈಟ್ ಕೊಡಿಸುವ ವ್ಯವಹಾರ ನಡೆಸಿದ್ದರು. ಬಳಿಕ ಸದಸ್ಯರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ, ಶುದ್ದ ಕ್ರಯ ದಾಖಲೆಗಳನ್ನು ತಯಾರಿಸಿದ್ದರು. ಆದರೆ ಖಾತೆ ಮಾಡಿಸುವ ವೇಳೆ ನಕಲಿ ದಾಖಲೆಗಳು ಬೆಳಕಿಗೆ ಬಂದು ವಂಚನೆ ಬಯಲಾಗಿದೆ.

ನಕಲಿ ಲೇಔಟ್ ಪ್ಲಾನ್ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿ ಒಟ್ಟು 1.6 ಕೋಟಿ ರೂಪಾಯಿ ವಂಚನೆ ನಡೆದಿದೆ ಎಂದು ದೂರುದಲ್ಲಿ ಉಲ್ಲೇಖಿಸಲಾಗಿದೆ. ಭಾವನ ಬೆಳಗೆರೆ, ಶರತ್ ಚಂದ್ರ, ರಾಹುಲ್ ಸೇರಿದಂತೆ ಅನೇಕ ಕಲಾವಿದರು ವಂಚನೆಯ ಬಲಿಯಾಗಿದ್ದಾರೆ. ಪ್ರಸ್ತುತ ಆರ್.ಆರ್. ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

error: Content is protected !!