ಸುರತ್ಕಲ್: ಕಾಟಿಪಳ್ಳ ಗ್ರಾಮದ ಗುರುನಗರದಲ್ಲಿ ರವಿವಾರ ರಾತ್ರಿ ಸಿಡಿಲು ಬಡಿದು ಐದು ಮಂದಿ ಗಾಯಗೊಂಡು, ಎರಡು ಮನೆಗಳು ಹಾನಿಗೊಂಡಿವೆ. ಮಾಹಿತಿ ಸಿಕ್ಕ ತಕ್ಷಣ ಮಂಗಳೂರು ಉತ್ತರ ಶಾಸಕರಾದ ಡಾ. ಭರತ್ ಶೆಟ್ಟಿ ವೈ. ಅವರು ಘಟನಾ ಸ್ಥಳಕ್ಕೆ ತೆರಳಿ ಪರಶೀಲನೆ ನಡೆಸಿದರು.
ಕುಟುಂಬಿಕರಿಗೆ ಸಾಂತ್ವಾನ ನೀಡಿದರಲ್ಲದೆ, ಸರ್ಕಾರದ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ತಕ್ಷಣ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಿಡಿಲಾಘಾತದಿಂದ ಹರಿಯಪ್ಪ (65) ಅವರ ಪತ್ನಿ ಕುಸುಮ (60), ಸೊಸೆಯಂದಿರಾದ ವಿನಯ (35), ಭಾರತಿ (30) ಹಾಗೂ ಮೊಮ್ಮಗ ಸಚಿತ್ (5)ಗೆ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಬಿಡುಗಡೆಗೊಳಿಸಲಾಗಿದೆ.
ಸಿಡಿಲಿನ ಆಘಾತದಿಂದ ಮನೆಯ ಮೇಲ್ಛಾವಣಿ ಸಂಪೂರ್ಣ ಹಾನಿಗೊಂಡಿದ್ದು, ವಿದ್ಯುತ್ ವ್ಯವಸ್ಥೆ, ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಅಡುಗೆ ಸಾಮಗ್ರಿಗಳು ಸುಟ್ಟು ಹೋಗಿವೆ. ಕುಟುಂಬವನ್ನು ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸಮೀಪದ ರವಿಕಲಾ ಅವರ ಮನೆಗೂ ಸಿಡಿಲು ಬಡಿದು ಹಾನಿಯಾಗಿದೆ.
ಈ ಸಂದರ್ಭದಲ್ಲಿ ಪೂರ್ವ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಲಕ್ಷ್ಮೀ ಶೇಖರ್ ದೇವಾಡಿಗ, ಸರಿತಾ ಶಶಿಧರ್, ಶೇಖರ್ ದೇವಾಡಿಗ, ಹಾಗೂ ಆಪದ್ಬಾಂಧವ ಸಂಸ್ಥೆಯ ಉಮೇಶ್ ದೇವಾಡಿಗ ಇಡ್ಯಾ, ಪ್ರಶಾಂತ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.