ಮಂಗಳೂರು: ಹಿರಿಯ ತುಳು ಮತ್ತು ಕನ್ನಡ ಸಾಹಿತಿ ಆರ್. ಲಲಿತಾ ರೈ (97) ರವಿವಾರ(ಅ.12) ನಿಧನ ಹೊಂದಿದ್ದಾರೆ.
1928 ಆಗಸ್ಟ್ 22ರಂದು ಮಂಗಳೂರಿನ ಕೊಡಿಯಾಲ ಬೈಲ್ ನಲ್ಲಿ ಜನಿಸಿದ ಲಲಿತಾ ರೈ ಅವರು ಪ್ರೌಢಶಾಲೆ ಅಧ್ಯಾಪಕಿಯಾಗಿ ಸೇವೆ ಸಲ್ಲಿದ್ದರು.
ಬರಹಗಾರ್ತಿಯಾಗಿ ಲಲಿತಾ ರೈ ಅವರ ನಿಯತಕಾಲಿಕಗಳಲ್ಲಿ ನೂರಾರು ಬರಹಗಳನ್ನು ಪ್ರಕಟಿಸಿದ್ದರು. ವಿಶ್ವದಾದ್ಯಂತ ಸಂಚರಿಸಿ ಅನುಭವಗಳನ್ನು ಬರಹ ರೂಪಕ್ಕೆ ಇಳಿಸಿದ್ದರು. ‘ಚಿತ್ತಗಾಂಗಿನ ಕ್ರಾಂತಿವೀರರು’, ‘ಕನ್ನಡ ಸಣ್ಣ ಕತೆಗಳ ಸಂಕಲನ’, ‘ಮತ್ತೆ ಬೆಳಗಿತು’, ‘ಸೊಡರು ಮತ್ತು ಇತರ ಕಥೆಗಳು’, ‘ಇಂಟರ್‌ನೆಟ್‌ನ ಒಳಗೆ ಮತ್ತು ಇತರ ಕತೆಗಳು’, ‘ತುಳು ಸಣ್ಣಕತೆಗಳ ಸಂಕಲನ-1’ ಮುಂತಾದವು ಪ್ರಮುಖ ಕೃತಿಗಳು
‘ದೇಸಾಂತರ’, ‘ಬೋಂಟೆ ದೇರೆಂಡ್’ ಅವರ ಪ್ರಮುಖ ತುಳು ಕಾದಂಬರಿಗಳು.‘ಇಂಟರ್‌ನೆಟ್‌ನ ಒಳಗೆ ಮತ್ತು ಇತರ ಕಥೆಗಳು’ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ತ್ರಿವೇಣಿ ಪುರಸ್ಕಾರ, ನಿರತ ಸಾಹಿತ್ಯ ಸಂಪದ ಸಂಸ್ಥೆಯಿಂದ ‘ಓಟು ಯಾರಿಗೆ’ ಕೃತಿಗೆ ಮೊದಲ ಬಹುಮಾನ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ‘ವೀರರಾಣಿ ಅಬ್ಬಕ್ಕ ಪ್ರಶಸ್ತಿ’ ಮುಂತಾದ ಹಲವು ಗೌರವಗಳು ಸಂದಿದ್ದವು.
ಲಲಿತಾ ರೈ ಅವರ ನಿಧನಕ್ಕೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.