ವಿದೇಶಾಂಗ ಸಚಿವ ಜೈಶಂಕರ್-ತಾಲಿಬಾನ್ ಸಚಿವರ ಸಭೆ: ಮಹಿಳಾ ಪತ್ರಕರ್ತರಿಗೆ ನಿರ್ಬಂಧಕ್ಕೆ ಪದ್ಮರಾಜ್ ಆಕ್ರೋಶ

ಮಂಗಳೂರು: ಭಾರತ ಪ್ರವಾಸದಲ್ಲಿರುವ ಅಫ್ಘಾನಿಸ್ಥಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಖಿ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ವೇಳೆ ಮಹಿಳಾ ಪತ್ರಕರ್ತರಿಗೆ ನಿರ್ಬಂಧ ಹೇರಿರುವುದು ವಿವಾದ ಮತ್ತು ಟೀಕೆಗೆ ಕಾರಣವಾಗಿದೆ.

ಭಾರತೀಯರಾದ ನಾವು ಮಹಿಳೆಯರನ್ನು ಪೂಜನೀಯ ಭಾವನೆಯಿಂದ ನೋಡುತ್ತಿದ್ದೇವೆ. ಪ್ರತೀ ಕ್ಷೇತ್ರದಲ್ಲೂ ಮಹಿಳೆಯರಿಗೆ ಸಮಾನ ಅವಕಾಶಗಳಿವೆ. ಆದರೆ ಭಾರತದಲ್ಲೂ ತಾಲಿಬಾನಿ ನೀತಿ ಅನುಸರಿಸಿದ್ದು ಖಂಡನೀಯ. ಮಹಿಳಾ ಸ್ವಾತಂತ್ರ್ಯ ಬಗ್ಗೆ ಮಾತನಾಡೋ ನಮ್ಮ‌ಪ್ರಧಾನಿ‌ ನರೇಂದ್ರ ಮೋದಿಯವರು ಈಗ ತಾರತಮ್ಯ ಆಗಿದ್ದರೂ ಮೌನ ವಹಿಸಿರುವುದು ಅನುಮಾನ ಹುಟ್ಟಿಸುವಂತಿದೆ. ಈ ಹಿಂದೆ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ತಾಲಿಬಾನಿ ಮನಸ್ಥಿತಿಯ ಸರ್ಕಾರ ಎಂದು ಟೀಕಿಸುತ್ತಿದ್ದ ಬಿಜೆಪಿಯವರು, ಈಗ ಇವರ ಮನಸ್ಥಿತಿ ಏನು ಎಂಬುದು ಜನತೆಗೆ ತಿಳಿಯುವಂತಾಗಿದೆ.

ಅಫ್ಘಾನ್ ಸ್ತ್ರೀಯರಿಗೆ ಶಿಕ್ಷಣ, ಉದ್ಯೋಗದಿಂದ ವಂಚಿತರನ್ನಾಗಿಸಿರುವ ತಾಲಿಬಾನ್ ಆಡಳಿತವು ತನ್ನ ಕೆಟ್ಟ ಮನಃಸ್ಥಿತಿಯನ್ನು ಭಾರತದಲ್ಲೂ ಪ್ರದರ್ಶಿಸಿರುವ ಬಗ್ಗೆ ಕೂಡಲೇ ಪ್ರಧಾನಿಯವರು ಮೌನ ಮುರಿಯಲಿ. ಸಂವಿಧಾನದ ನಾಲ್ಕನೇ ಅಂಗ ಎನ್ನುವ ಮಾಧ್ಯಮ ಪ್ರತಿನಿಧಿಗಳಿಗೆ ಇಂತಹ ಪರಿಸ್ಥಿತಿಯಾದರೆ ಮುಂದಿನ ದಿನಗಳಲ್ಲಿ ನಾವು ಯಾವ ಸ್ಥಿತಿಗೆ ತಲುಪಬಹುದು? ಈ ಬಗ್ಗೆ ಪ್ರಧಾನಿ ಮೋದಿಯವರು ಉತ್ತರಿಸಲಿ ಎಂದು ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್. ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

error: Content is protected !!