ಖಾಸಗಿ ಬ್ಯಾಂಕ್‌ ವ್ಯವಸ್ಥಾಪಕ ನಿಗೂಢ ಸಾವು !

ಬೆಂಗಳೂರು: ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗೆ ಹೋಗಿದ್ದ ಬ್ಯಾಂಕ್‌ ಮ್ಯಾನೇಜರ್‌ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಸಾವಿಗೆ ನಿಖರ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ಮೂಲದ ಉಲ್ಲಾಳದ ನಿವಾಸಿ ಮೇಘರಾಜ್‌ (31) ಮೃತಪಟ್ಟವರು.

ಬ್ಯಾಂಕ್‌ವೊಂದರಲ್ಲಿ ಮ್ಯಾನೇಜರ್‌ ಆಗಿದ್ದ ಮೇಘರಾಜ್‌, ಉಲ್ಲಾಳದಲ್ಲಿ ಪತ್ನಿ ಹಾಗೂ 6 ತಿಂಗಳ ಮಗುವಿನೊಂದಿಗೆ ವಾಸಿಸುತ್ತಿದ್ದರು. ಆರ್‌. ಆರ್‌.ನಗರ ಮುಖ್ಯ ರಸ್ತೆಯಲ್ಲಿರುವ 1522 ಬಾರ್‌ ಅಂಡ್‌ ರೆಸ್ಟೋರೆಂಟ್‌ಗೆ ಗುರುವಾರ ರಾತ್ರಿ ಮೂವರು ಸ್ನೇಹಿತರೊಂದಿಗೆ ಹೋಗಿ ಮದ್ಯ ಸೇವಿಸಿ ಊಟ ಮಾಡಿದ್ದರು. ನಂತರ ಬಿಲ್‌ ಕೊಟ್ಟು ಸ್ನೇಹಿತರೊಂದಿಗೆ ರೆಸ್ಟೋರೆಂಟ್‌ನಿಂದ ರಾತ್ರಿ ಸುಮಾರು 11.30ಕ್ಕೆ ಹೊರಗೆ ಹೋಗಲು ಮುಂದಾಗಿದ್ದರು.

ಸ್ನೇಹಿತರ ಬಳಿ ಒಂದು ಅಲ್ಲೇ ನಿಲ್ಲುವಂತೆ ಹೇಳಿ ಮತ್ತೆ ಒಳಗೆ ಹೋಗಿದ್ದರು. ಕೆಲವು ಹೊತ್ತಾದರೂ ಮೇಘರಾಜ್‌ ಬಾರದೇ ಇದ್ದಾಗ, ಸ್ನೇಹಿತರು ಒಳಗೆ ಹೋಗಿ ನೋಡಿದರೂ ಕಾಣಿಸಿಲ್ಲ. ಬಳಿಕ ಬಾರ್‌ ಮ್ಯಾನೇಜರ್‌ಗೆ ಮಾಹಿತಿ ನೀಡಿ, ಅಲ್ಲಿನ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಮೇಘರಾಜ್‌ ವಾಶ್‌ರೂಂಗೆ ಹೋಗಿರುವುದು ಕಂಡು ಬಂದಿತ್ತು. ಸ್ನೇಹಿತರು ವಾಶ್‌ ರೂಂ ಬಳಿ ಹೋಗಿ ಬಾಗಿಲು ತಟ್ಟಿ ಕೂಗಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಆತಂಕಗೊಂಡು ಬಾಗಿಲು ಒಡೆದು ನೋಡಿದ್ದರು. ಆ ವೇಳೆ ಮೇಘರಾಜ್‌ ಮೃತಪಟ್ಟಿರುವುದು ಕಂಡು ಬಂದಿತ್ತು. ಬಳಿಕ ಈ ವಿಚಾರವನ್ನು ಪೊಲೀಸರಿಗೆ ತಿಳಿಸಲಾಯಿತು. ಅಪರಾಧ ಸ್ಥಳ ಪರಿಶೀಲನಾಧಿಕಾರಿಗಳು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಮೇಘರಾಜ್‌ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.

error: Content is protected !!