ತುಳುನಾಡಿನ ಹೆಮ್ಮೆಯ ಕಂಬಳಕ್ಕೆ ರಾಜ್ಯದಿಂದ ಕ್ರೀಡಾ ಮಾನ್ಯತೆ ಸಿಕ್ಕಿದೆ- ದೇವಿಪ್ರಸಾದ್ ಶೆಟ್ಟಿ ಬೆಳಪು

ಮಂಗಳೂರು: ತುಳುನಾಡಿನ ಜನಪ್ರಿಯ ಜಾನಪದ ಕ್ರೀಡೆ ಕಂಬಳ ಇದೀಗ ರಾಜ್ಯ ಸರ್ಕಾರದ ಅಧಿಕೃತ ಮಾನ್ಯತೆ ಪಡೆದಿದೆ. ಯುವಜನ ಸಬಲೀಕರಣ ಮತ್ತು ಕ್ರೀಡಾ ಪ್ರಾಧಿಕಾರವು ಕಂಬಳ ಕ್ರೀಡೆಯ ಪರಂಪರೆ, ವೈಶಿಷ್ಟ್ಯತೆ ಮತ್ತು ಜನಪ್ರಿಯತೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಶನ್ (ರಿ.)ಗೆ ಅಧಿಕೃತ ಮಾನ್ಯತೆ ನೀಡಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಡಾ. ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.

ಶನಿವಾರ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಂಬಳ ನಮ್ಮ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಸಾಂಪ್ರದಾಯಿಕ ಕ್ರೀಡೆ ಮಾತ್ರವಲ್ಲ, ಇದು ಸಾಹಸ ಮತ್ತು ಶ್ರಮದ ಸಂಕೇತವಾಗಿದೆ. ಕೋಣಗಳ ಯಜಮಾನರ ಶ್ರಮ, ಆಯೋಜಕರ ನಿಷ್ಠೆ ಮತ್ತು ಜನರ ಆಸಕ್ತಿ ಕಂಬಳವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿವೆ. ಕಂಬಳದಾಟಕ್ಕೆ ಕೆಲ ವರ್ಷಗಳ ಹಿಂದೆ ಉಂಟಾದ ವಿರೋಧದ ಸಂದರ್ಭದಲ್ಲಿ ಕ್ರೀಡಾ ಮಾನ್ಯತೆ ನೀಡುವ ಬೇಡಿಕೆ ಬಲವಾಗಿ ಕೇಳಿಬಂದಿತ್ತೇ ಹೊರತು ಅಲ್ಲಿಯೇ ನಿಂತಿರಲಿಲ್ಲ. ಸರ್ಕಾರದ ಪರಿಗಣನೆ ಬಳಿಕ ಈಗ ಕಂಬಳಕ್ಕೆ ಅಧಿಕೃತ ಗುರುತಿನ ಮಾನ್ಯತೆ ದೊರೆತಿದೆ ಎಂದರು.

ದಿನಾಂಕ ಮೇ 5, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ, ಕಂಬಳ ಕ್ರೀಡೆಯ ಸಾಂಸ್ಕೃತಿಕ ಮತ್ತು ಕ್ರೀಡಾ ಪ್ರಾಮುಖ್ಯತೆಯನ್ನು ಪರಿಗಣಿಸಿ ರಾಜ್ಯ ಕಂಬಳ ಅಸೋಸಿಯೇಶನ್‌ಗೆ ಮಾನ್ಯತೆ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ಮೂರು ವರ್ಷಗಳ ಕಾಲ ಈ ಅಸೋಸಿಯೇಶನ್‌ನ ಅಧಿಕಾರಾವಧಿ ಮುಂದುವರಿಯಲಿದೆ. ಕಂಬಳ ಆಯೋಜನೆಗೆ ಬೇಕಾದ ನಿಯಮಾವಳಿ, ಬಜೆಟ್‌ನಲ್ಲಿನ ಅನುದಾನ ವಿತರಣೆಯು ಹಾಗೂ ಆಯೋಜಕರಿಗೆ ನೀಡುವ ಮಾರ್ಗಸೂಚಿಗಳನ್ನು ರಾಜ್ಯ ಕಂಬಳ ಅಸೋಸಿಯೇಶನ್‌ನ ಮೂಲಕ ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದರು.

ಕಾನೂನು ಅಡೆತಡೆ ನಿವಾರಣೆ
ಕಂಬಳಕ್ಕೆ ದೊರೆತಿರುವ ಈ ಮಾನ್ಯತೆಯಿಂದ ಕ್ರೀಡೆಯ ಸುತ್ತಲಿನ ಕಾನೂನು ಅಡೆತಡೆಗಳು ನಿವಾರಣೆಯಾಗಲಿದ್ದು, ಆಯೋಜನೆಗಳು ಸುಗಮಗೊಳ್ಳಲಿವೆ. ಹತ್ತಾರು ವರ್ಷಗಳಿಂದ ಮುಂದುವರಿದ ಬೇಡಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕ್ರೀಡಾ ಇಲಾಖೆ ಹಾಗೂ ಕರಾವಳಿಯ ಶಾಸಕರಿಗೆ ಅಸೋಸಿಯೇಶನ್ ಧನ್ಯವಾದ ತಿಳಿಸಿದೆ.

ಮುಂದಿನ ಯೋಜನೆಗಳು
ರಾಜ್ಯದ ಎಲ್ಲಾ ಕಂಬಳಗಳು ಕ್ರೀಡಾ ಪ್ರಾಧಿಕಾರದ ಲಾಂಛನದಡಿ ನಡೆಯಲಿವೆ. ಓಟಗಾರರು, ತೀರ್ಪುಗಾರರು ಹಾಗೂ ಕಂಬಳ ಕಾರ್ಮಿಕರಿಗೆ ಭತ್ಯೆ ಮತ್ತು ಆರೋಗ್ಯ ವಿಮೆ ಕಲ್ಪಿಸುವ ವಿಚಾರ ಚರ್ಚೆಯಲ್ಲಿದೆ. ಕಂಬಳದ ಅಧಿಕೃತ ಧ್ವಜ ಮತ್ತು ಲಾಂಛನ ಬಿಡುಗಡೆ ಮಾಡಲಾಗುವುದು. ಆಯೋಜಕರು ಕಂಬಳ ಆಯೋಜನೆಗೆ ಮುಂಚಿತವಾಗಿ ಅಸೋಸಿಯೇಶನ್ ಮೂಲಕ ಇಲಾಖಾ ಅನುಮತಿ ಪಡೆಯಬೇಕು ಎಂದು ವಿವರಿಸಿದರು.

ಸರ್ಕಾರದಿಂದ ಬರುವ ಅನುದಾನವನ್ನು ಅಸೋಸಿಯೇಶನ್ ಮೂಲಕ ಹಂಚಿಕೆ ಮಾಡಲಾಗುವುದು. ವಾರ್ಷಿಕ ಮಹಾಸಭೆ, ಆಡಿಟ್ ವರದಿ ಹಾಗೂ ಕಾರ್ಯಯೋಜನೆ ಸರ್ಕಾರಕ್ಕೆ ಸಲ್ಲಿಸಲಾಗುವುದು. ರಾಜ್ಯ ಕಂಬಳ ಅಸೋಸಿಯೇಶನ್‌ನಲ್ಲಿ 18 ಮಂದಿ ಗವರ್ನಿಂಗ್ ಸಮಿತಿ ಸದಸ್ಯರು, 3 ಮಂದಿ ಗೌರವ ಸಲಹೆಗಾರರು ಸೇರಿದಂತೆ ಅವಿಭಜಿತ ಜಿಲ್ಲೆಯ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಅಹ್ವಾನಿತರಾಗಿರುತ್ತಾರೆ ಎಂದು ಡಾ. ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ವಿಜಯ್ ಕುಮಾರ್ ಕಂಗಿನಮನೆ, ಸಮಿತಿ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಮುಚ್ಚೂರು ಕಲ್ಕುಡೆ ಉಪಸ್ಥಿತರಿದ್ದರು.

error: Content is protected !!