ಮಂಗಳೂರು: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2017ರಲ್ಲಿ ನಡೆದ ಕಲಾಯಿ ಅಶ್ರಫ್ ಕೊಲೆ ಪ್ರಕರಣದ ಆರೋಪಿಯಾಗಿದ್ದ ಭರತ್ ಕುಮ್ಡೇಲು ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಇಂದು (ಅ.10) ಹಾಜರಾಗಿದ್ದು, ನ್ಯಾಯಾಲಯವು ಆರೋಪಿಗೆ ಅಕ್ಟೋಬರ್ 25ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬಂಟ್ವಾಳ ಕೊಳತ್ತಮಜಲು ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದಲ್ಲಿಯೂ ಭರತ್ ಕುಮ್ಡೇಲ್‌ನನ್ನು ಪ್ರಮುಖ ಆರೋಪಿ ಎಂದು ಪೊಲೀಸರು ಹೆಸರಿಸಿದ್ದು, ಇತ್ತೀಚೆಗೆ ಪ್ರಕರಣದ ಆರೋಪಿಗಳ ವಿರುದ್ಧ ಕೋಕಾ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿತ್ತು. ವಾರಂಟ್ ಹಾಗೂ ಕೋಕಾ ಪ್ರಕರಣದಿಂದ ಬಚಾವಾಗಲು ಕುಮ್ಡೇಲ್ ನ್ಯಾಯಾಲಯಕ್ಕೆ ಶರಣಾಗಿರಬಹುದೆಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭಿಸಿದೆ.
ಭರತ್ ಕುಮ್ಡೇಲು ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 169/2017ರಂತೆ ಕಲಂಗಳು 143, 147, 148, 447, 448, 302, 120(ಬಿ), 201 ಹಾಗೂ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ವಾರೆಂಟ್ ಹೊರಡಿಸಲಾಗಿತ್ತು.
ಇದೇ ವೇಳೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 54/2025, ಕಲಂಗಳು 103, 109, 118(1), 190, 191(1), 118(2), 191(2), 191(3) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಎ-1 ಆರೋಪಿಯಾಗಿರುವ ಭರತ್ ಕುಮ್ಡೇಲು ಪ್ರಕರಣ ದಾಖಲಾಗಿದ ದಿನದಿಂದಲೇ ತಲೆಮರೆಸಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಭರತ್ ಕುಮ್ಡೇಲು ವಿರುದ್ಧ ವಿವಿಧ ಬಂಟ್ವಾಳ ಗ್ರಾಮಾಂತರ, ಉಪ್ಪಿನಂಗಡಿ, ಪುತ್ತೂರು ಸೇರಿ ಹಲವುಪೊಲೀಸ್ ಠಾಣೆಗಳಲ್ಲಿ ಕೊಲೆ, ಹಲ್ಲೆ, ಬೆದರಿಕೆ ಸೇರಿ ಹದಿನೈದಕ್ಕೂ ಅಧಿಕ ಪ್ರಕರಣಗಳಿವೆ. ಪೊಲೀಸರು ಆರೋಪಿಯ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳ ತನಿಖೆಯನ್ನು ಮುಂದುವರಿಸಿದ್ದು, ಅಗತ್ಯ ದಾಖಲೆಗಳನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
2017ರಲ್ಲಿ ಅಶ್ರಫ್ ಕಲಾಯಿ ಮರ್ಡರ್
ಬಂಟ್ವಾಳದ ಎಸ್ ಡಿ ಪಿ ಐ ಕಾರ್ಯಕರ್ತ, ರಿಕ್ಷಾ ಡ್ರೈವರ್ ಆಗಿದ್ದ ಅಶ್ರಫ್ ಕಲಾಯಿ, ಬೀಡಿ ಬ್ರಾಂಚ್ ಕಡೆಗೆ ರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ ಜೂನ್ 21, 2017ರಂದು ಭಯಾನಕ ಹತ್ಯೆಗೀಡಾಗಿದ್ದ. ಪೊಲೀಸರು ಹತ್ಯೆ ಪ್ರಕರಣದಲ್ಲಿ ಭರತ್ ಕುಮ್ಡೇಲು ಸೇರಿದಂತೆ ಅವರ ಸಹಚರರಾದ ದಿವ್ಯರಾಜ್ ಶೆಟ್ಟಿ, ಪವನ್ ಕುಮಾರ್, ರಂಜಿತ್, ಅಭಿ, ಸಂತು ಮತ್ತು ಶಿವಪ್ರಸಾದ್ ಎಂಬವರನ್ನು ಬಂಧಿಸಿದ್ದರು. ಬಂಟ್ವಾಳದ ಕಲ್ಪನೆ ಎಂಬಲ್ಲಿ ರಿಕ್ಷಾ ಡ್ರೈವರ್ ರಾಜೇಶ್ ಪೂಜಾರಿ ಹತ್ಯೆಯ ಬೆನ್ನಲ್ಲೇ ಶ್ರಫ್ ಕಲಾಯಿಯ ರಿವೇಂಜ್ ಹತ್ಯೆ ನಡೆದಿತ್ತು.