ಮಂಗಳೂರು: ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ಕೋರ್ಟ್ ವಜಾಗೊಳಿಸಿದ್ದು, ಅವರಿಗೆ ಬಂಧನ ಭೀತಿ ಎದುರಾಗಿದೆ. ಎರಡೂ ಕಡೆಯ ವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯ ಈ ತೀರ್ಪು ನೀಡಿದೆ.
ಕಳೆದ 20 ದಿನಗಳಿಂದ ತಲೆಮರೆಸಿಕೊಂಡಿದ್ದ ತಿಮರೋಡಿ, ಮುಂಚಿತ ಬಂಧನದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಆದರೆ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದ್ದು, ಇದೀಗ ಅವರಿಗೆ ಹೈಕೋರ್ಟ್‌ನಲ್ಲಿ ಮರುಅರ್ಜಿ ಸಲ್ಲಿಸಲು ಅವಕಾಶವಿದೆ.
ಸರ್ಕಾರದ ಪರ ವಕೀಲರು ಜಾಮೀನು ನೀಡದಂತೆ ತೀವ್ರವಾಗಿ ವಾದಿಸಿದರು. ಅಕ್ರಮ ಶಸ್ತ್ರಾಸ್ತ್ರಗಳ ಪ್ರಕರಣದ ಗಂಭೀರತೆ ಹಾಗೂ ತಿಮರೋಡಿಗೆ ಜಾಮೀನು ನೀಡಿದರೆ ತನಿಖೆಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಅವರು ಕೋರ್ಟ್ ಗಮನಕ್ಕೆ ತಂದರು. ತಿಮರೋಡಿ ವಿರುದ್ಧ ಸಾಕಷ್ಟು ಪ್ರಾಥಮಿಕ ಮಾಹಿತಿ ಹಾಗೂ ವಶಪಡಿಸಿಕೊಂಡ ವಸ್ತುಗಳಿವೆ ಎಂದು ಅವರು ವಾದಿಸಿದರು.
ತಿಮರೋಡಿ ಪರ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಅವರು, ಶಸ್ತ್ರಾಸ್ತ್ರ ಕಾಯ್ದೆಯಡಿ ಯಾವುದೇ ಸ್ಪಷ್ಟವಾದ ಪ್ರಾಥಮಿಕ ಸಾಕ್ಷ್ಯವಿಲ್ಲದೆ ಪ್ರಕರಣ ದಾಖಲಿಸಲಾಗಿದೆ ಎಂದು ವಾದಿಸಿದರು. ವಶಪಡಿಸಿಕೊಂಡ ವಸ್ತುಗಳ ಸಂಪೂರ್ಣ ವಿವರಗಳನ್ನು ಪೊಲೀಸರು ನೀಡಿಲ್ಲ ಎಂದು ಅವರು ಕೋರ್ಟ್‌ಗೆ ಹೇಳಿದರು.
ವಶಪಡಿಸಿಕೊಂಡ ಎರಡು ತಲವಾರುಗಳ ಉದ್ದ, ಅಗಲ, ಸ್ಥಿತಿ ಮುಂತಾದ ವಿವರಗಳು ದಾಖಲಾಗಿಲ್ಲ. ಅದೇ ರೀತಿ ಬಂದೂಕಿನ ವಿನ್ಯಾಸ ಹಾಗೂ ಕಾರ್ಯಪದ್ದತಿಯ ವಿವರಣೆಯೂ ನೀಡಲಾಗಿಲ್ಲ. ಈ ಮಾಹಿತಿಗಳಿಲ್ಲದೆ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸುವುದು ಕಾನೂನಾತ್ಮಕವಾಗಿ ಸರಿಯಲ್ಲ ಎಂದು ವಕೀಲರು ಅಭಿಪ್ರಾಯಪಟ್ಟರು.
ಕೆಲವು ಶಸ್ತ್ರಾಸ್ತ್ರಗಳಿಗೆ ಕಾನೂನುಬದ್ಧವಾಗಿ ಪರವಾನಗಿ ಅಗತ್ಯವಿಲ್ಲ ಎಂಬ ಅಂಶವನ್ನೂ ಅವರು ಪ್ರಸ್ತಾಪಿಸಿದರು. ಸರಿಯಾದ ತಾಂತ್ರಿಕ ವಿವರಣೆ ಇಲ್ಲದೇ ಪ್ರಕರಣ ದಾಖಲಿಸಿರುವುದು ಕಾನೂನು ಪ್ರಕ್ರಿಯೆಗೆ ವಿರುದ್ಧ ಎಂದು ವಾದಿಸಿದರು.
ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಮಾಡಿರುವ ಹಿನ್ನೆಲೆಯಲ್ಲಿ, ತಿಮರೋಡಿ ಇದೀಗ ಹೈಕೋರ್ಟ್ ಬಾಗಿಲು ತಟ್ಟಲಿದ್ದಾರೆ. ಕೋರ್ಟ್‌ನ ಈ ತೀರ್ಪು ತಿಮರೋಡಿಗೆ ಮತ್ತೊಂದು ಕಾನೂನು ʻಅಗ್ನಿಪರೀಕ್ಷೆʼ ಆಗಲಿದೆ. ಗಡಿಪಾರು ಆದೇಶದಿಂದ ಸ್ವಲ್ಪ ನಿರಾಳಗೊಂಡಿದ್ದ ತಿಮರೋಡಿಗೆ ಈಗ ಈ ಪ್ರಕರಣದಿಂದ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.