20 ಮಕ್ಕಳ ಸಾವಿಗೆ ಕಾರಣನಾದ ʻಕೋಲ್ಡ್ರಿಫ್’ ಸಿರಪ್ ಮಾಲೀಕ ಬಂಧನ: ಇನ್ನಷ್ಟು ಭಯಾನಕ ಔಷಧ ಹಗರಣಗಳ ತನಿಖೆ

ಭೋಪಾಲ್: ಮಧ್ಯಪ್ರದೇಶದಲ್ಲಿ ಮಕ್ಕಳ ಜೀವ ಕಸಿದ ಕೆಮ್ಮಿನ ಸಿರಪ್ ದುರಂತದ ಪ್ರಮುಖ ಆರೋಪಿ ಹಾಗೂ ಸ್ರೇಸನ್ ಫಾರ್ಮಾ ಸಂಸ್ಥೆಯ ಮಾಲೀಕ ರಂಗನಾಥನ್ ಗೋವಿಂದನ್ ನನ್ನು ಪೊಲೀಸರು ಚೆನ್ನೈಯಲ್ಲಿ ಬಂಧಿಸಿ ಇನ್ನಷ್ಟು ಭಯಾನಕ ಔಷಧ ಹಗರಣಗಳ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಅನುಮತಿಸಿದ ಮಿತಿಗಳನ್ನು ಮೀರಿದ ವಿಷಕಾರಿ ವಸ್ತುವನ್ನು ಹೊಂದಿದ್ದ ‘ಕೋಲ್ಡ್ರಿಫ್’ ಸಿರಪ್ ಸೇವನೆಯಿಂದ ಚಿಂದ್ವಾರ ಜಿಲ್ಲೆಯ ಕನಿಷ್ಠ 20 ಮಕ್ಕಳು ಸಾವನ್ನಪ್ಪಿದ್ದರು. ಈ ಘಟನೆ ನಂತರ ರಂಗನಾಥನ್ ಮತ್ತು ಈತನ ಪತ್ನಿ ಪರಾರಿಯಾಗಿದ್ದರು. ಗುರುವಾರ ಬೆಳಗಿನ ಜಾವ 1:30 ಕ್ಕೆ ಚೆನ್ನೈಯಲ್ಲಿ ಬಂಧನ ನಡೆದಿತು.

ಚಿಂದ್ವಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ ಒಂದು ದಿನದ ನಂತರ, ಮಧ್ಯಪ್ರದೇಶದ ವಿಶೇಷ ಪೊಲೀಸ್ ತಂಡ ಅಕ್ಟೋಬರ್ 5 ರಂದು ಚೆನ್ನೈ ತಲುಪಿತ್ತು. ಈ ತಂಡವನ್ನು ಪರಾಸಿಯಾ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ನೇತೃತ್ವ ವಹಿಸಿದ್ದರು. ತಂಡದಲ್ಲಿ ಮಹಿಳಾ ಅಧಿಕಾರಿಗಳು, ಸೈಬರ್ ತಜ್ಞರು ಮತ್ತು ಔಷಧ ತಪಾಸಣಾಧಿಕಾರಿಗಳು ಸೇರಿದ್ದರು.
ಬಂಧನದ ಬಳಿಕ ರಂಗನಾಥನನ್ನು ಕಾಂಚೀಪುರಂನ ಸ್ರೇಸನ್ ಫಾರ್ಮಾ ಕಾರ್ಖಾನೆಗೆ ಕರೆದೊಯ್ದು, ಅಲ್ಲಿ ಪ್ರಮುಖ ದಾಖಲೆಗಳು ಹಾಗೂ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಯಿತು. ಈತನ ಹೆಚ್ಚಿನ ವಿಚಾರಣೆಗಾಗಿ ಚಿಂದ್ವಾರಕ್ಕೆ ಕರೆತರಲು ಪೊಲೀಸರು ಚೆನ್ನೈ ನ್ಯಾಯಾಲಯದಿಂದ ಟ್ರಾನ್ಸಿಟ್ ರಿಮಾಂಡ್ ಕೋರಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಅವರ ವಾಹನ, ಚಲನವಲನಗಳು, ಬ್ಯಾಂಕ್ ವಹಿವಾಟುಗಳು ಮತ್ತು ನಿವಾಸಗಳ ಮೇಲ್ವಿಚಾರಣೆ ನಡೆಸಿ ಎಚ್ಚರಿಕೆಯಿಂದ ಬಂಧಿಸಲಾಗಿದೆ. ಈ ಕ್ರಮದಿಂದ ಭಾರತದ ಅತ್ಯಂತ ಭಯಾನಕ ಔಷಧ ಹಗರಣಗಳಲ್ಲಿ ಒಂದರ ಹಿಂದಿನ ಸತ್ಯ ಬಹಿರಂಗವಾಗುವ ನಿರೀಕ್ಷೆ ಇದೆ. ಒಂದು ದಿನ ಮೊದಲು, ಚಿಂದ್ವಾರ ಪೊಲೀಸರು ರಂಗನಾಥನ್ ಬಂಧನಕ್ಕೆ ಮಾಹಿತಿ ನೀಡುವವರಿಗೆ ₹20,000 ಬಹುಮಾನ ಘೋಷಿಸಿದ್ದರು.

ಚೆನ್ನೈ ಮೂಲದ ಸ್ರೇಸನ್ ಫಾರ್ಮಾಸ್ಯುಟಿಕಲ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯು 1990ರಲ್ಲಿ ಖಾಸಗಿ ಸಂಸ್ಥೆಯಾಗಿ ನೋಂದಾಯಿಸಲ್ಪಟ್ಟಿದ್ದರೂ, ನಂತರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ದಾಖಲೆಗಳಿಂದ ರದ್ದುಗೊಂಡಿತ್ತು. ಆದರೂ, ಅದು ಸ್ವಾಮ್ಯದ ಮಾದರಿಯಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದುದು ತನಿಖೆಯಲ್ಲಿ ಬಹಿರಂಗವಾಗಿದೆ.

ಪೊಲೀಸರು ಇದೀಗ ರಾಸಾಯನಿಕ ಪೂರೈಕೆದಾರರು, ಸ್ಟಾಕಿಸ್ಟ್‌ಗಳು ಹಾಗೂ ವೈದ್ಯಕೀಯ ಪ್ರತಿನಿಧಿಗಳು ಸೇರಿದಂತೆ ಸಂಪೂರ್ಣ ಪೂರೈಕೆ ಸರಪಳಿಯನ್ನು ತನಿಖೆಗೆ ಒಳಪಡಿಸುತ್ತಿದ್ದಾರೆ. ವಿಷಕಾರಿ ಸಿರಪ್ ಮಕ್ಕಳು ತಲುಪಲು ಕಾರಣವಾದ ಮಾರಕ ಜಾಲದ ಪ್ರತಿಯೊಂದು ಲಿಂಕ್‌ ಗುರುತಿಸಲು ಕ್ರಮ ಕೈಗೊಳ್ಳಲಾಗಿದೆ.

16 ಮುಗ್ಧ ಮಕ್ಕಳನ್ನು ಬಲಿಪಡೆದ ‘ಕೋಲ್ಡ್ರಿಫ್’ ಕೆಮ್ಮಿನ ಸಿರಪ್: ಹಲವು ಭಯಾನಕ ಮಾಹಿತಿಗಳು ಬಹಿರಂಗ

 

error: Content is protected !!