16 ಮುಗ್ಧ ಮಕ್ಕಳನ್ನು ಬಲಿಪಡೆದ ‘ಕೋಲ್ಡ್ರಿಫ್’ ಕೆಮ್ಮಿನ ಸಿರಪ್: ಹಲವು ಭಯಾನಕ ಮಾಹಿತಿಗಳು ಬಹಿರಂಗ

ಭೋಪಾಲ್/ಚೆನ್ನೈ: ಮಧ್ಯಪ್ರದೇಶದ ಚಿಂದ್ವಾರದಲ್ಲಿ 16 ಮಕ್ಕಳ ಸಾವಿಗೆ ಕಾರಣವಾದ ‘ಕೋಲ್ಡ್ರಿಫ್’ ಕೆಮ್ಮಿನ ಸಿರಪ್ ತಯಾರಿಸಿದ ಕಾರ್ಖಾನೆಯು ಭಯಾನಕ ಮಾಹಿತಿ ಬಹಿರಂಗವಾಗಿದೆ.

ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಶ್ರೀಸನ್ ಫಾರ್ಮಾಸ್ಯುಟಿಕಲ್ಸ್ ಸಂಸ್ಥೆಗೆ ತೆರಳಿ ಪರಿಶೀಲನೆ ನಡೆಸಿದ ತನಿಖಾ ಅಧಿಕಾರಿಗಳು, ಗ್ಯಾಸ್ ಸ್ಟೌವ್‌ಗಳ ಮೇಲೆ ಬಿಸಿ ಮಾಡಲಾದ ರಾಸಾಯನಿಕಗಳು, ತುಕ್ಕು ಹಿಡಿದ ಉಪಕರಣಗಳು, ಪ್ಲಾಸ್ಟಿಕ್ ಪೈಪ್‌ಗಳ ಮೂಲಕ ಸೋರುತ್ತಿದ್ದ ದ್ರವಗಳು ಮತ್ತು ಕೈಗವಸುಗಳಿಲ್ಲದೆ ಕೆಲಸ ಮಾಡುತ್ತಿದ್ದ ತರಬೇತಿ ರಹಿತ ಕಾರ್ಮಿಕರ ದೃಶ್ಯಗಳನ್ನು ಕಂಡು ಆಘಾತಕ್ಕೊಳಗಾದರು.

ಕೈಗಾರಿಕಾ ದರ್ಜೆಯ ರಾಸಾಯನಿಕದಿಂದ ಸಿರಪ್ ತಯಾರಿ
ತಮಿಳುನಾಡು ಔಷಧ ನಿಯಂತ್ರಣ ನಿರ್ದೇಶನಾಲಯದ ಅಕ್ಟೋಬರ್ 3ರ ವರದಿಯ ಪ್ರಕಾರ, ಕಂಪನಿಯು ‘ಕೋಲ್ಡ್ರಿಫ್’ ತಯಾರಿಸಲು ಬಳಸಿದ ಪ್ರಮುಖ ಪದಾರ್ಥ ಪ್ರೊಪಿಲೀನ್ ಗ್ಲೈಕೋಲ್ ಅನ್ನು ಪ್ರಮಾಣಿತ ಔಷಧ ಪೂರೈಕೆದಾರರ ಬದಲಿಗೆ ಚೆನ್ನೈನ ಸ್ಥಳೀಯ ವ್ಯಾಪಾರಿಗಳಾದ ಸನ್‌ರೈಸ್ ಬಯೋಟೆಕ್ ಮತ್ತು ಪಾಂಡಿಯಾ ಕೆಮಿಕಲ್ಸ್ ಸಂಸ್ಥೆಗಳಿಂದ ನಗದು ಹಾಗೂ ಗೂಗಲ್ ಪೇ ಮುಖಾಂತರ ಖರೀದಿಸಿರುವುದು ಬಯಲಾಗಿದೆ.
ಸಿರಪ್‌ಗೆ ಕೈಗಾರಿಕಾ ದರ್ಜೆಯ ಪ್ರೊಪಿಲೀನ್ ಗ್ಲೈಕೋಲ್ ಬಳಸಿದ್ದು, ಅದರಲ್ಲಿ ಅತ್ಯಂತ ವಿಷಕಾರಿ ಡೈಥಿಲೀನ್ ಗ್ಲೈಕೋಲ್ (DEG) ಅಂಶ ಪತ್ತೆಯಾಗಿದೆ.

ಸಿರಪ್‌ ಹೆಸರಲ್ಲಿ ವಿಷ ತಯಾರಿಸುತ್ತಿದ್ದ ಕಂಪೆನಿ
ಸಿರಪ್‌ಗೆ ಮುದ್ರಣದ ಶಾಯಿ, ಬ್ರೇಕ್ ದ್ರವ(ಗ್ರೀಸ್), ಅಂಟು ಮತ್ತು ಲೂಬ್ರಿಕಂಟ್ ತಯಾರಿಕೆಯಲ್ಲಿ ಬಳಸುವ ಡೈಥಿಲೀನ್ ಗ್ಲೈಕೋಲ್ ಬಳಸಲಾಗುತ್ತಿದ್ದು, ಇದು ಮಾನವ ದೇಹಕ್ಕೆ ವಿಷ. ಮಕ್ಕಳ ಮೂತ್ರಪಿಂಡ ಬಯಾಪ್ಸಿಗಳಲ್ಲಿ ಈ ರಾಸಾಯನಿಕವು ಅನುಮತಿತ ಮಟ್ಟಕ್ಕಿಂತ 500 ಪಟ್ಟು ಹೆಚ್ಚಿದ್ದು, ಅಂದರೆ 48.6 ಪ್ರತಿಶತ ಸಾಂದ್ರತೆಯಲ್ಲಿ ಕಂಡುಬಂದಿದೆ. ಇದರಿಂದಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 16 ಮಕ್ಕಳು ತೀವ್ರ ಮೂತ್ರಪಿಂಡ ವೈಫಲ್ಯಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.

ಉತ್ಪಾದನಾ ಘಟಕದಲ್ಲಿ ನಿಯಮ ಉಲ್ಲಂಘನೆ

ತನಿಖಾಧಿಕಾರಿಗಳು 1940ರ ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ ಅಡಿಯಲ್ಲಿ 39 ಗಂಭೀರ ಮತ್ತು 325 ಪ್ರಮುಖ ಉಲ್ಲಂಘನೆಗಳನ್ನು ದಾಖಲಿಸಿದ್ದಾರೆ. ಸಿರಪ್‌ ಅನ್ನು ಯಾವುದೇ ಅರ್ಹ ರಸಾಯನಶಾಸ್ತ್ರಜ್ಞರಿಲ್ಲದೆ ಉತ್ಪಾದಿಸಲಾಗುತ್ತಿತ್ತು. ಗುಣಮಟ್ಟ ಪರೀಕ್ಷೆಗಳಿಲ್ಲದ ಕಚ್ಚಾ ವಸ್ತು ಬಳಕೆ ವಿಪರೀತವಾಗಿತ್ತು.

ಶುದ್ಧತೆ ಪರೀಕ್ಷೆ ಇಲ್ಲದ ನೀರು, ವೆಂಟಿಲೇಟರ್, ಫಿಲ್ಟರ್, ಕೀಟ ನಿಯಂತ್ರಣ, ಸುರಕ್ಷತಾ ಮಟ್ಟ ವಿಪರೀತವಾಗಿ ತಳಮಟ್ಟದಲ್ಲಿತ್ತು. ಗಾಳಿ ಶೋಧಕ ಘಟಕಗಳಿಲ್ಲದೆ ಔಷಧ ತಯಾರಿ ಮಾಡಿರುವುದು ಪತ್ತೆಯಾಗಿದೆ.

ಪರವಾನಗಿ ರದ್ದು- ಮುಂದುವರಿದ ತನಿಖೆ
ತಮಿಳುನಾಡು ಔಷಧ ನಿಯಂತ್ರಣ ಪ್ರಾಧಿಕಾರವು ತಕ್ಷಣ ಉತ್ಪಾದನೆ ನಿಲ್ಲಿಸುವಂತೆ ಆದೇಶಿಸಿ, ಕಂಪನಿಯ ಪರವಾನಗಿಯನ್ನು ಅಮಾನತುಗೊಳಿಸಿದೆ. ಮಧ್ಯಪ್ರದೇಶ ಸರ್ಕಾರವು ಇಬ್ಬರು ಔಷಧ ನಿರೀಕ್ಷಕರು ಮತ್ತು ಉಪ ನಿರ್ದೇಶಕರನ್ನು ಅಮಾನತುಗೊಳಿಸಿ, ರಾಜ್ಯದ ಔಷಧ ನಿಯಂತ್ರಕ ದಿನೇಶ್ ಮೌರ್ಯರನ್ನು ವರ್ಗಾವಣೆ ಮಾಡಿದೆ. ಅಲ್ಲದೆ ಚಿಂದ್ವಾರದ ಸ್ಥಳೀಯ ವೈದ್ಯರನ್ನು ವೈದ್ಯಕೀಯ ನಿರ್ಲಕ್ಷ್ಯಕ್ಕಾಗಿ ಬಂಧಿಸಲಾಗಿದೆ.

ಬಲಿಪಡೆದ ಸಿರಪ್‌ಗೆ ಇತ್ತು ವ್ಯಾಲಿಡಿಟಿ!
ವಿಚಿತ್ರವೆಂದರೆ ಚಿಂದ್ವಾರದಲ್ಲಿ ಬಳಕೆಯಾದ SR-13 ಬ್ಯಾಚ್ ಮೇ 2025ರಲ್ಲಿ ತಯಾರಿಸಲ್ಪಟ್ಟಿದ್ದು, ಏಪ್ರಿಲ್ 2027ರವರೆಗೆ ಮಾರಾಟಕ್ಕೆ ಇರಬೇಕಾಗಿತ್ತು. ಈ ಬ್ಯಾಚ್‌ನ ಸಿರಪ್‌ಗಳು ತಮಿಳುನಾಡು, ಒಡಿಶಾ ಮತ್ತು ಪುದುಚೇರಿ ರಾಜ್ಯಗಳಿಗೂ ವಿತರಣೆಗೊಂಡಿವೆ. ಇದೇ ಸೌಲಭ್ಯದಲ್ಲಿ ತಯಾರಿಸಲಾದ ಇತರ ಸಿರಪ್‌ಗಳು — ರೆಸ್ಪೊಲೈಟ್ ಡಿ, ಜಿಎಲ್, ಎಸ್‌ಟಿ ಹಾಗೂ ಹೆಪ್ಸಾಂಡಿನ್ — ಪರೀಕ್ಷೆಯಲ್ಲಿ ಪ್ರಮಾಣಿತ ಗುಣಮಟ್ಟದ್ದಾಗಿವೆ.

ಅಕ್ರಮವೇ ಘಟನೆಗೆ ಕಾರಣ:

ತನಿಖೆಯಲ್ಲಿ ಭಾಗವಹಿಸಿದ ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು NDTVಗೆ ಮಾಹಿತಿ ನೀಡಿ, “ಈ ದುರಂತಕ್ಕೆ ಕೇವಲ ಕಂಪೆನಿ ಮಾತ್ರ ಹೊಣೆಯಲ್ಲ, ಚೆನ್ನೈನ ಅಕ್ರಮ ಖರೀದಿಯಿಂದ ಆರಂಭವಾಗಿ ಕಾಂಚೀಪುರಂನ ನಿರ್ಲಕ್ಷ್ಯದ ಉತ್ಪಾದನೆ ಮತ್ತು ಮಧ್ಯಪ್ರದೇಶದ ನಿಯಂತ್ರಣರಹಿತ ವಿತರಣೆಯವರೆಗೆ ಪ್ರಮಾದಗಳು ನಡೆದಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.

16 ಮುಗ್ಧ ಮಕ್ಕಳ ಜೀವ ಕಸಿದುಕೊಂಡ ಈ ದುರಂತವು, ದೇಶದ ಔಷಧ ತಯಾರಿಕೆ ಮತ್ತು ನಿಯಂತ್ರಣ ವ್ಯವಸ್ಥೆಯಲ್ಲಿ ಅಡಗಿರುವ ಭೀಕರ ನಿರ್ಲಕ್ಷ್ಯವನ್ನು ಬೆಳಕಿಗೆ ತಂದಿದೆ. ಸುರಕ್ಷತೆ, ಗುಣಮಟ್ಟ ಮತ್ತು ನಿಯಂತ್ರಣದ ಪ್ರಾಮಾಣಿಕ ಕ್ರಮವಿಲ್ಲದೆ ತಯಾರಿಸುವ ಒಂದು ಪ್ರಾಣ ರಕ್ಷಿಸಬೇಕಾದ ಔಷಧಿ ಇನ್ನೊಬ್ಬರ ಜೀವವನ್ನೂ ಕಸಿಯಬಹುದು ಎನ್ನುವ ಕಠೋರ ಸತ್ಯವನ್ನು ಬೆಳಕಿಗೆ ತಂದಿದೆ.

(ಮೂಲ: NDTV)

error: Content is protected !!