ಮೈಸೂರು: ನಟ ದರ್ಶನ್ ಜೈಲು ಪಾಲಾಗಿರುವುದರಿಂದ ಆತ ಸಾಕಿರುವ ಕುದುರೆಗಳನ್ನು ನೋಡಿಕೊಳ್ಳಲು ಆಗದ ಕಾರಣ ತೋಟದ ಮುಂದೆ ಕುದುರೆಗಳು ಮಾರಾಟಕ್ಕೆ ಇವೆ ಎಂಬ ಬೋರ್ಡ್ ಹಾಕಿದ್ದಾರೆ ಎನ್ನುವ ವಿಷಯ ಒಳಗೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮೈಸೂರು-ತಿ.ನರಸೀಪುರ ಹೆದ್ದಾರಿ ಬಳಿ ಇರುವ ತೂಗುದೀಪ ಫಾರಂನಲ್ಲಿ ನಟ ದರ್ಶನ್ ಕಾಟೇವಾಡಿ ಕುದುರೆಯ ತಳಿ ಸಂವರ್ಧನ ಕೇಂದ್ರ ಸ್ಥಾಪನೆ ಮಾಡಿದ್ದರು. ಇಲ್ಲಿ ಹಲವಾರು ಕುದುರೆಗಳನ್ನು ಸಾಕಿದ್ದಾರೆ. ಶೂಟಿಂಗ್ ಬಿಡುವಿನ ಸಮಯದಲ್ಲಿ ಇಲ್ಲೇ ಅವರು ಹೆಚ್ಚು ಕಾಲ ಕಳೆಯುತ್ತಿದ್ದರು. ಆದರೆ ಈಗ ಜೈಲಿಗೆ ಹೋಗಿರುವುದರಿಂದ ಫಾರಂನಲ್ಲಿ ಇರುವ ಕುದುರೆಗಳನ್ನು ನೋಡಿಕೊಳ್ಳಲು ಬೇರೆಯವರಿಗೆ ಆಗದಿರುವ ಹಿನ್ನೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎನ್ನುವ ಸುದ್ದಿಯನ್ನು ಹಬ್ಬಿಸಲಾಗಿದೆ.
20 ವರ್ಷದ ಹಿಂದೆ ತೋಟಕ್ಕೆ ಕೇವಲ ತೂಗುದೀಪ ಫಾರಂ ಎಂದೇ ಹೆಸರನ್ನು ಇಡಲಾಗಿತ್ತು. ಬಳಿಕ ದರ್ಶನ್ ಪ್ರವರ್ಧಮಾನಕ್ಕೆ ಬಂದ ನಂತರ ದರ್ಶನ್ ಕಾಟೇವಾಡಿ ಸ್ಟಡ್ ಫಾರಂ ಎಂಬ ಹೆಸರನ್ನು ಬರೆಯಿಸಿ ಬೋರ್ಡ್ ನೇತು ಹಾಕಲಾಗಿತ್ತು. ಇದಾದ ಕೆಲ ವರ್ಷಗಳ ನಂತರ ದರ್ಶನ್ ತನ್ನ ಮಗ ವಿನೀಶ್ ದರ್ಶನ್ ಹೆಸರಿಟ್ಟರು. ಜೊತೆಗೆ ಕುದುರೆಗಳು ಮಾರಾಟಕ್ಕೆ ಇವೆ ಎನ್ನುವುದನ್ನೂ ಬರೆಯಿಸಿದ್ದರು. ಆ ಬೋರ್ಡು ತುಂಬಾ ಹಳೆಯದಾದ ಕಾರಣ ಗ್ರಾಫಿಕ್ಸ್ ವಿನ್ಯಾಸವನ್ನು ಒಳಗೊಂಡ ಹೊಸ ಬೋರ್ಡ್ ಅನ್ನು ಇತ್ತೀಚೆಗೆ ತೋಟದ ಮುಂಭಾಗ ಹಾಕಲಾಗಿತ್ತು. ಇದರಿಂದಾಗಿ ಕೆಲವರು ಕುದುರೆಗಳನ್ನು ಸಾಕಲು ಆಗದೆ ಮಾರಾಟ ಮಾಡುತ್ತಿದ್ದಾರೆಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ ಎನ್ನಲಾಗಿದೆ.