ಚಂಡೀಗಢ: ಹರಿಯಾಣದ ಹಿರಿಯ ಐಪಿಎಸ್ ಅಧಿಕಾರಿ, ಎಡಿಜಿಪಿ ಪೂರಣ್ ಕುಮಾರ್ (2001ನೇ ಬ್ಯಾಚ್) ಅವರು ಸೋಮವಾರ ಮಧ್ಯಾಹ್ನ ತಮ್ಮ ಚಂಡೀಗಢದ ಸೆಕ್ಟರ್ 11 ರ ನಿವಾಸದಲ್ಲಿ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಧ್ಯಾಹ್ನ 1.30ರ ಸುಮಾರಿಗೆ ಸೆಕ್ಟರ್ 11 ಪೊಲೀಸ್ ಠಾಣೆಯ ಎಸ್‌ಎಚ್‌ಒ ಮತ್ತು ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಪೂರಣ್ ಕುಮಾರ್ ಅವರದ್ದೆಂದು ದೃಢಪಡಿಸಿದ್ದಾಗಿ ಚಂಡೀಗಢದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕನ್ವರ್ದೀಪ್ ಕೌರ್ ತಿಳಿಸಿದ್ದಾರೆ.
ಆತ್ಮಹತ್ಯೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಘಟನಾ ಸ್ಥಳವನ್ನು ಕೇಂದ್ರ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (CFSL) ತಂಡ ಪರಿಶೀಲಿಸುತ್ತಿದ್ದು, ತನಿಖೆ ಮುಂದುವರಿದಿದೆ. ಪ್ರಾಥಮಿಕವಾಗಿ ಯಾವುದೇ ಆತ್ಮಹತ್ಯೆ ಪತ್ರ ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೂರಣ್ ಕುಮಾರ್ ಇತ್ತೀಚೆಗಷ್ಟೇ, ಸೆಪ್ಟೆಂಬರ್ 29 ರಂದು ರೋಹ್ಟಕ್‌ನ ಸುನಾರಿಯಾ ಪೊಲೀಸ್ ತರಬೇತಿ ಕೇಂದ್ರ (PTC) ನಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದರು. ಅವರ ಪತ್ನಿ ಅಮನ್ ಪಿ. ಕುಮಾರ್, ಐಎಎಸ್ ಅಧಿಕಾರಿ ಆಗಿದ್ದು, ಪ್ರಸ್ತುತ ಜಪಾನ್‌ನಲ್ಲಿ ಅಧಿಕೃತ ಪ್ರವಾಸದಲ್ಲಿದ್ದಾರೆ. ಅವರು ಮಂಗಳವಾರ ಸಂಜೆ ಭಾರತಕ್ಕೆ ವಾಪಸು ಬರಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಘಟನೆಯು ಹಿರಿಯ ಅಧಿಕಾರಿವರ್ಗದಲ್ಲಿ ಆಘಾತ ಮೂಡಿಸಿದೆ. ಪೊಲೀಸರು ಆತ್ಮಹತ್ಯೆಯ ಹಿಂದಿನ ಕಾರಣವನ್ನು ಪತ್ತೆಹಚ್ಚಲು ತನಿಖೆ ಕೈಗೊಂಡಿದ್ದಾರೆ.