ಬಂಟ್ವಾಳ: ರೋಟರಿ ಕ್ಲಬ್‌ಗಳ ಆಶ್ರಯದಲ್ಲಿ ಅ.12ರಂದು 2ನೇ ವರ್ಷದ ರೋಟರಿ ಕಂಬಳ

ಮಂಗಳೂರು: ರೋಟರಿ ಕ್ಲಬ್ ಬಂಟ್ವಾಳ ಲೊರೊಟೊ ಹಿಲ್ಸ್, ರೋಟರಿ ಕ್ಲಬ್ ಬಂಟ್ವಾಳ, ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ, ರೋಟರಿ ಕ್ಲಬ್ ಮೊಡಂಕಾಪು ಮತ್ತು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಆಶ್ರಯದಲ್ಲಿ, ವೀರ ವಿಕ್ರಮ ಜೋಡುಕೆರೆ ಕಂಬಳ ಸಮಿತಿ ಸಿದ್ದಕಟ್ಟೆ ಕೊಡಂಗೆ ಸಹಯೋಗದಲ್ಲಿ ಅಕ್ಟೋಬರ್ 12ರಂದು ಬಂಟ್ವಾಳದ ಕೊಡಂಗೆ ಸಿದ್ದಕಟ್ಟೆಯಲ್ಲಿ 2ನೇ ವರ್ಷದ ರೋಟರಿ ಕಂಬಳ ನಡೆಯಲಿದೆ ಎಂದು  ರೋಟರಿ ಕ್ಲಬ್ ಸ್ಥಾಪಕಾಧ್ಯಕ್ಷ, ಕಂಬಳದ ನೇತೃತ್ವ ವಹಿಸಿರುವ ರೊ. ಎಲಿಯಾಸ್ ಸಾಂಕ್ಟಿಸ್ ಅವರು ತಿಳಿಸಿದ್ದಾರೆ.

 

ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಂಬಳದಲ್ಲಿ ಸುಮಾರು 170 ತಂಡಗಳು ಭಾಗವಹಿಸುವ ನಿರೀಕ್ಷೆಯಾಗಿದೆ. ಅವರು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರೋಟರಿ ಸಂಸ್ಥೆಯ ಕುರಿತು ಮಾಹಿತಿ ನೀಡಿದರು. ರೋಟರಿ ಸಂಸ್ಥೆ 1905ರಲ್ಲಿ ಅಮೆರಿಕಾದ ಶಿಕಾಗೋದಲ್ಲಿ ಸ್ಥಾಪನೆಗೊಂಡು ಇಂದು 220ಕ್ಕೂ ಹೆಚ್ಚು ದೇಶಗಳಲ್ಲಿ 35,000 ಕ್ಲಬ್‌ಗಳೊಂದಿಗೆ, 12 ಲಕ್ಷ ಸದಸ್ಯರನ್ನು ಹೊಂದಿರುವ ವಿಶ್ವದಾದ್ಯಾಂತ ಪ್ರಮುಖ ಸೇವಾ ಸಂಸ್ಥೆಯಾಗಿದೆ ಎಂದರು.

ಈ ಕಂಬಳದಲ್ಲಿ ಜ್ಯೂನಿಯರ್ ಮತ್ತು ಸಬ್ ಜೂನಿಯರ್ ವಿಭಾಗಗಳಲ್ಲಿ ಹಗ್ಗ ಕೋಣ ಸ್ಪರ್ಧೆಗಳು ನಡೆಯುತ್ತವೆ. ಉತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ಹೆಚ್ಚು ಬೆಲೆ ಪಡೆದು ಮಾರಾಟವಾಗುವ ಅವಕಾಶ ದೊರೆಯುತ್ತದೆ, ಇದರಿಂದ ರೈತರಿಗೆ ಲಾಭವಾಗುವ ನಿರೀಕ್ಷೆಯಿದೆ. ಕಂಬಳವು ಗ್ರಾಮೀಣ ಜನರಿಗೆ ಸಂಸ್ಕೃತಿ, ಐತಿಹಾಸ ಮತ್ತು ಕ್ರೀಡಾ ಸಂತೋಷವನ್ನು ನೀಡುವ ಒಂದು ಮಹತ್ವದ ಕಾರ್ಯಕ್ರಮವಾಗಿದೆ ಎಂದು ಎಲಿಯಾಸ್ ಸಾಂಕ್ಟಿಸ್ ಹೇಳಿದರು.

ಕಾರ್ಯಕ್ರಮ ಉದ್ಘಾಟನೆ ರೊ. ಪದ್ಮರಾಜ್ ಬಲ್ಲಾಳ ಅವರು ನಡೆಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ಬಂಟ್ವಾಳ ಮಾನ್ಯ ಶಾಸಕರಾದ  ರಾಜೇಶ್ ನ್ಯಾಕ್ ಉಳಪಾಡಿಗುತ್ತು ವಹಿಸಲಿದ್ದಾರೆ. ರೋಟರಿ ಜಿಲ್ಲಾ ಗವರ್ನರ್ ರೊ. ರಾಮಕೃಷ್ಣ ಪಿ.ಕೆ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಹಲವು ರೋಟರಿ ಜಿಲ್ಲಾ ಗಣ್ಯರು ಹಾಗೂ ಸಮಾಜ ಸೇವಕರೂ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಈ ಕಂಬಳ ಗ್ರಾಮೀಣ ಪ್ರದೇಶದಲ್ಲಿ ರೋಟರಿ ಸಂಸ್ಥೆಯ ಸೇವಾ ಮನೋಭಾವವನ್ನು ಬೆಳೆಸುವ ಮತ್ತು ಕಂಬಳ ಪರಂಪರೆಯನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿದೆ. ಹಾಗಾಗಿ ಈ ಬಾರಿ ರೈತರಿಗೆ ಅವಕಾಶಕೊಡುವ ನಿಟ್ಟಿನಲ್ಲಿ  ವಿಜೇತ ಕೋಣದ ಮಾಲಕರಿಗೆ ಅರ್ಧ ಹಾಗೂ ಕಾಲು ಪವನು ಚಿನ್ನ ನೀಡಲಾಗುವುದು.  ಕಂಬಳ ಎನ್ನುವುದು ರೈತರ ಕ್ರೀಡೆಯಾಗಿದ್ದು, ಜಾತಿಮತ ಭೇದವಿಲ್ಲದೆ ಎಲ್ಲರೂ ಭಾಗವಹಿಸುವಂತೆ ಅವರು ಕರೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ರೊ ಅವಿಲ್ ಮಿನೆಜಸ್, ರೊ ವಿಜಯ ಪೆರ್ನಾಂಡಿಸ್, ರೊ ಬಸ್ತಿ ಮಾಧವ ಶೆಣೈ, ರೊ ದುರ್ಗಾದಾಸ್ ಶೆಟ್ಟಿ, ರೊ ಪ್ರೀಮಾ ವೈಲೆಟ್ ಪೆರ್ನಾಂಡಿಸ್, ರೊ ಭಾಸ್ಕ‌ರ್ ರೈ ಕಟ್ಟ, ರೊ ಸುರೇಶ್ ಶೆಟ್ಟಿ, ರೊ ಪದ್ಮರಾಜ್ ಬಲ್ಲಾಳ, ರೊ ಮೋಹನ್ ಕೆ ಶ್ರಿಯಾನ್, ರೊ ಶಶಿಧರ್ ಶೆಟ್ಟಿ ಕಲ್ಲಾಪು, ರೊ ಮೊಹಮ್ಮದ್ ಯಾಸಿರ್, ರೋ ಕೆ. ನಾರಾಯಣ ಹೆಗ್ಡೆ, ರೋ ರಾಜ್ ಗೋಪಾಲ್ ರೈ, ರೋ ರಾಘವೇಂದ್ರ ಭಟ್, ರೋ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.

error: Content is protected !!