ಉಡುಪಿ: ಎಕೆಎಂಎಸ್ ಬಸ್ ಮಾಲಕ ಸೈಫುದ್ದೀನ್ ಕೊಲೆ ಪ್ರಕರಣದಲ್ಲಿ ಹೊಸ ತಿರುವು ಕಂಡುಬಂದಿದೆ. ಮುಖ್ಯ ಆರೋಪಿ ಫೈಜಲ್ ಖಾನ್, ತನ್ನ ಪತ್ನಿ ರಿಧಾ ಶಬಾನಾಳನ್ನು ಬಲೆಯಾಗಿ ಬಳಸಿ, ಎಕೆಎಂಎಸ್ ಮಾಲಕ ಸೈಫುದ್ದೀನ್‌ನನ್ನು ಕೊಲೆಮಾಡಿದ ವಿಚಾರ ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಉಡುಪಿ ಪೊಲೀಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಎಸ್‌ಪಿ ಅವರು, “ಈ ಪ್ರಕರಣದಲ್ಲಿ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆ ಸಂಚಿನಲ್ಲಿ ನೇರವಾಗಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಫೈಜಲ್ ಖಾನ್‌ನ ಪತ್ನಿ ರಿಧಾ ಶಬಾನಾಳನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ,” ಎಂದು ತಿಳಿಸಿದರು.
ಪತ್ನಿಯೊಂದಿಗೆ ನಿಕಟ ಸಂಪರ್ಕವೇ ಕೊಲೆಗೆ ಕಾರಣ
ತನಿಖೆಯ ಪ್ರಕಾರ, ರಿಧಾ ಶಬಾನಾ ಮತ್ತು ಸೈಫುದ್ದೀನ್ ಸುಮಾರು ಒಂದು ವರ್ಷದಿಂದ ದೂರವಾಣಿ ಕರೆಗಳು, ಚಾಟಿಂಗ್ ಮತ್ತು ಫೋಟೋ ಹಂಚಿಕೆಗಳ ಮೂಲಕ ಸಂಪರ್ಕದಲ್ಲಿದ್ದರು. ಈ ನಿಕಟತೆಯ ಬಗ್ಗೆ ತಿಳಿದ ಫೈಜಲ್ ಖಾನ್, ವೈಯಕ್ತಿಕ ದ್ವೇಷದಿಂದ ಸೈಫುದ್ದೀನ್‌ನ ಕೊಲೆಗೆ ಸಂಚು ರೂಪಿಸಿದ್ದಾನೆ ಎಂದು ಹೇಳಿದ್ದಾರೆ.
ರಿಧಾ ನಿನಗಾಗಿ ಕಾಯುತ್ತಿದ್ದಾಳೆ…!
ಕೊಲೆಯ ದಿನ, ಸೈಫುದ್ದೀನ್ ಮಂಗಳೂರಿಗೆ ಹೊರಡಬೇಕಾಗಿದ್ದರೂ, ಫೈಜಲ್ “ರಿಧಾ ನಿನ್ನನ್ನು ಕಾಯುತ್ತಿದ್ದಾಳೆ” ಎಂದು ಹೇಳಿ ಮಲ್ಪೆಯ ಕೊಡವೂರು ಪ್ರದೇಶಕ್ಕೆ ಕರೆ ತಂದಿದ್ದಾನೆ. ರಿಧಾ ಕೂಡ ಫೋನ್ ಮೂಲಕ “ನಾನು ಕೊಡವೂರಿನ ಮನೆಯಲ್ಲಿ ನಿನಗಾಗಿ ಕಾಯುತ್ತಿದ್ದೇನೆ” ಎಂದು ಹೇಳಿ ಆತನನ್ನು ಬಲೆಗೆ ಸೆಳೆದಿದ್ದಾಳೆ. ಅಲ್ಲಿ ಫೈಜಲ್ ಖಾನ್ ಮತ್ತು ಸಹಚರರು ಸೈಫುದ್ದೀನ್ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದಾರೆ ಎಂದು ಎಸ್‌ಪಿ ಹೇಳಿದ್ದಾರೆ.
ಫೈಜಲ್ ಖಾನ್‌ನ ಪತ್ನಿ ರಿಧಾ ಶಬಾನಾಳ ಬಂಧನದೊಂದಿಗೆ ಪ್ರಕರಣ ಹೊಸ ಹಂತಕ್ಕೇರಿದೆ. ಮಲ್ಪೆ ಪೊಲೀಸರು ಈ ಕುರಿತು ವಿಸ್ತೃತ ತನಿಖೆ ಮುಂದುವರಿಸಿದ್ದಾರೆ ಎಂದು ಎಸ್‌ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.