ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಹಾರ ಸಾಮಗ್ರಿ ವಿತರಿಸುತ್ತಿದ್ದ ಬಿಜೆಪಿ ಸಂಸದನಿಗೆ ಕಲ್ಲೇಟು!

ಕೊಲ್ಕತ್ತಾ: ಉತ್ತರ ಬಂಗಾಳದ ನಾಗರಕಟ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಬಿಜೆಪಿ ಸಂಸದ ಖಗೇನ್ ಮುರ್ಮು ಅವರು ಪ್ರವಾಹ ಪೀಡಿತ ಸಮುದಾಯಗಳಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸುತ್ತಿದ್ದಾಗ, ಅವರು ಕಲ್ಲಿನಿಂದ ದಾಳಿಗೊಳಗಾಗಿದ್ದು ಗಂಭೀರ ಗಾಯಗೊಂಡಿದ್ದಾರೆ. ಮುಖದಿಂದ ರಕ್ತಸ್ರಾವ ಕಾಣಿಸಿದ್ದು, ಭದ್ರತಾ ಸಿಬ್ಬಂದಿಯ ಸಹಾಯದಿಂದ ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಜಲಪೈಗುರು ಪ್ರದೇಶದ ಸಮೀಪ ಬಿಜೆಪಿ ಶಾಸಕರಾದ ಡಾ. ಶಂಕರ್ ಘೋಷ್ ಸಹ ಸಂತ್ರಸ್ತರಿಗೆ ನೆರವಾಗಲು ಸ್ಥಳಕ್ಕೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಟಿಎಂಸಿ ಗೂಂಡಾಗಳಿಂದ ಹಲ್ಲೆ!
ಬಿಜೆಪಿ ವಕ್ತಾರ ಅಮಿತ್ ಮಾಳವೀಯ ಅವರು ಟ್ವಿಟ್ಟರ್‌ನಲ್ಲಿ “ಬಂಗಾಳದಲ್ಲಿ ಟಿಎಂಸಿಯ ಜಂಗಲ್ ರಾಜ್! ಪ್ರತಿನಿಧಿಗಳು ಮತ್ತು ಮಾಲ್ಡಾದಿಂದ ಎರಡು ಬಾರಿ ಸಂಸದರಾಗಿರುವ ಖಗೇನ್ ಮುರ್ಮು ಅವರು ಪರಿಹಾರ ಕಾರ್ಯಾಚರಣೆಗೆ ಹೋಗುತ್ತಿದ್ದಾಗ ಟಿಎಂಸಿ ಗೂಂಡಾಗಳಿಂದ ಕ್ರೂರ ಹಲ್ಲೆ.” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಕೂಡ ಈ ದಾಳಿಯನ್ನು ಖಂಡಿಸಿದ್ದಾರೆ. “ಖಗೇನ್ ಮುರ್ಮು ಇಂದು ನಾಗರಕಟದಲ್ಲಿ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರೊಂದಿಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದರು. ಅವರಿಗೆ ಗಂಭೀರ ಗಾಯಗಳಾಗಿದ್ದು, ಈ ಹಲ್ಲೆ ಆಕ್ರಮಣಾತ್ಮಕವಾಗಿದೆ.” ಎಂದಿದ್ದಾರೆ.

ಉತ್ತರ ಬಂಗಾಳದಲ್ಲಿ ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ವ್ಯಾಪಕ ಹಾನಿ ನಡೆದಿದೆ. ಡಾರ್ಜಿಲಿಂಗ್‌ನಲ್ಲಿ ಭೂಕುಸಿತದಿಂದ ಸಾವಿನ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಸಾವಿರಾರು ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಖಗೇನ್ ಮುರ್ಮು ಮಾಲ್ದಾಹಾ ಉತ್ತರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. 2006–2019 ರವರೆಗೆ ಹಬೀಬ್‌ಪುರ ಕ್ಷೇತ್ರದಿಂದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಮೂಲತಃ ಸಿಪಿಐಎಂ ಸದಸ್ಯರಾಗಿದ್ದ ಅವರು 2019ರಲ್ಲಿ ಬಿಜೆಪಿ ಸೇರಿದ್ದಾರೆ. ಘಟನೆಯ ಹೊರತಾಗಿ, ಬಿಜೆಪಿ ಸಂಘಟನೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆಗಳನ್ನು ಮುಂದುವರಿಸುವುದಾಗಿ ಘೋಷಿಸಿದೆ.

error: Content is protected !!