ವಾಷಿಂಗ್ಟನ್ / ಕೇರೋ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಇಸ್ರೇಲ್ ಮತ್ತು ಹಮಾಸ್ ಎರಡೂ ಕೂಡ ತಕ್ಷಣ ಶಾಂತಿ ಮಾತುಕತೆ ನಡೆಸಬೇಕು, ವಿಳಂಬವಾದರೆ “ಭಾರಿ ರಕ್ತಪಾತ” ಸಂಭವಿಸುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು.
ಇಸ್ರೇಲ್ ಮತ್ತು ಹಮಾಸ್ ನಡುವೆ ಈಜಿಪ್ಟ್‌ನಲ್ಲಿ ನಡೆಯಲಿರುವ ಮೊದಲ ಸುತ್ತಿನ ಮಾತುಕತೆಗಳಿಗೆ ಮುನ್ನವೇ ಟ್ರಂಪ್ ತಮ್ಮ ‘ಟ್ರುತ್ ಸೋಶಿಯಲ್’ ಪ್ಲಾಟ್‌ಫಾರ್ಮ್‌ನಲ್ಲಿ ಈ ರೀತಿ ಹೇಳಿಕೆ ನೀಡುವ ಮೂಲಕ ಹಮಾಸ್-ಇಸ್ರೇಲ್ ಯುದ್ಧ ನಿಲ್ಲಿಸಿದ ಕ್ರೆಡಿಟ್ ತೆಗೆದುಕೊಳ್ಳಲು ಮುಂದಾಗಿದ್ದಾರೆ.
“ಮೊದಲ ಹಂತ ಈ ವಾರ ಪೂರ್ಣಗೊಳ್ಳಬೇಕು. ಇಬ್ಬರೈ ಶೀಘ್ರ ಮುಂದುವರಿಯಲ್ಲು ಮನವಿ ಮಾಡುತ್ತೇನೆ. ಶತಮಾನಗಳಿಂದ ಮುಂದುವರಿದಿರುವ ಸಂಘರ್ಷಗಳ ಮೇಲೆ ನ ನಾನು ನಿಗಾ ಇಟ್ಟುಕೊಂಡಿದ್ದೇನೆ. ಸಮಯ ಅತ್ಯಂತ ಪ್ರಮುಖ, ಇಲ್ಲದಿದ್ದರೆ ಯಾರೂ ನೋಡಲು ಬಯಸದಂತಹ ಭಾರಿ ರಕ್ತಪಾತ ನಡೆಯಬಹುದು” ಎಂದು ಟ್ರಂಪ್ ಬರೆದಿದ್ದಾರೆ.
ಟ್ರಂಪ್ ಅವರ ಪ್ರಕಾರ, ಗಾಜಾ ಶಾಂತಿ ಯೋಜನೆಗೆ ಸಂಬಂಧಿಸಿದಂತೆ ಹಮಾಸ್ ಸೇರಿದಂತೆ ಅನೇಕ ದೇಶಗಳ ಜೊತೆ ಸಕಾರಾತ್ಮಕ ಚರ್ಚೆಗಳು ನಡೆದಿವೆ. ಈ ವಾರಾಂತ್ಯದಲ್ಲಿ ಹಮಾಸ್ ಮತ್ತು ಅರಬ್, ಮುಸ್ಲಿಂ ಹಾಗೂ ಇತರ ರಾಷ್ಟ್ರಗಳೊಂದಿಗೆ ಬಹಳ ಸಕಾರಾತ್ಮಕ ಮಾತುಕತೆಗಳು ನಡೆದಿವೆ. ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದೂ, ಗಾಜಾದಲ್ಲಿ ಯುದ್ಧವನ್ನು ಅಂತ್ಯಗೊಳಿಸುವುದೂ ಮುಖ್ಯ ಉದ್ದೇಶವಾಗಿದೆ. ಈ ಚರ್ಚೆಗಳು ಯಶಸ್ವಿಯಾಗಿ ಮುಂದುವರಿಯುತ್ತಿವೆ, ಎಂದು ಟ್ರಂಪ್ ಹೇಳಿದರು.
ಅವರ ಪ್ರಕಾರ, ತಾಂತ್ರಿಕ ತಂಡಗಳು ಸೋಮವಾರ ಈಜಿಪ್ಟ್‌ನಲ್ಲಿ ಮತ್ತೆ ಸಭೆ ಸೇರಿ, ಯೋಜನೆಯ ಮೊದಲ ಹಂತದ ಅಂತಿಮ ವಿವರಗಳನ್ನು ಸ್ಪಷ್ಟಪಡಿಸಲು ನಿರ್ಧರಿಸಿರುವುದಾಗಿ ಹೇಳಿದರು. ಈ ಹಂತವು ಮುಖ್ಯವಾಗಿ ಒತ್ತೆಯಾಳುಗಳ ಬಿಡುಗಡೆಯ ಮೇಲೆ ಕೇಂದ್ರೀಕರಿಸಿದೆ ಎಂದು ವರದಿಯಾಗಿದೆ.
ಹಮಾಸ್‌ಗೆ ಟ್ರಂಪ್ ಎಚ್ಚರಿಕೆ
ಟ್ರಂಪ್ ಕಳೆದ ಶುಕ್ರವಾರ ರಾತ್ರಿ ಹಮಾಸ್ ತನ್ನ ಶಾಂತಿ ಯೋಜನೆಯ ಕೆಲವು ಭಾಗಗಳಿಗೆ ಒಪ್ಪಿಕೊಂಡಿದೆ ಎಂದು ಹೇಳಿದ ಬಳಿಕ, ಅವರು ಮತ್ತೆ ಹಮಾಸ್‌ಗೆ ಎಚ್ಚರಿಕೆ ನೀಡಿದರು. “ಹಮಾಸ್ ತ್ವರಿತವಾಗಿ ಚಲಿಸಿ ಇಸ್ರೇಲ್‌ನೊಂದಿಗೆ ಶಾಂತಿ ಒಪ್ಪಂದಕ್ಕೆ ಒಪ್ಪಿಕೊಳ್ಳಬೇಕು. ವಿಳಂಬ ಮಾಡಿದರೆ ಗಾಜಾದಲ್ಲಿ ಇನ್ನಷ್ಟು ವಿನಾಶ ಅನುಭವಿಸಬೇಕಾಗುತ್ತದೆ,” ಎಂದು ಟ್ರಂಪ್ ಎಚ್ಚರಿಸಿದರು.
ಅವರು ಇಸ್ರೇಲ್ ಗಾಜಾ ಮೇಲೆ ಬಾಂಬ್ ದಾಳಿ ನಿಲ್ಲಿಸಬೇಕೆಂದು ಕೂಡಾ ಹೇಳಿದರು. ಆದರೆ ಕೆಲವು ಗಂಟೆಗಳಲ್ಲೇ ಇಸ್ರೇಲ್ ಮತ್ತೊಂದು ದಾಳಿಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ ಎಂದು NDTV ವರದಿ ಮಾಡಿದೆ.
ಇಸ್ರೇಲ್ ಪ್ರಧಾನಿ ನೆತನ್ಯಾಹು ಪ್ರತಿಕ್ರಿಯೆ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ವೀಡಿಯೋ ಸಂದೇಶದಲ್ಲಿ “ಮುಂದಿನ ದಿನಗಳಲ್ಲಿ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಘೋಷಣೆ ಸಾಧ್ಯವಾಗಬಹುದು” ಎಂದು ಹೇಳಿದರು.
“ನಾವು ಮಹತ್ವದ ಸಾಧನೆಯ ಅಂಚಿನಲ್ಲಿದ್ದೇವೆ. ಸುಕ್ಕೋಟ್ ಹಬ್ಬದ ವೇಳೆಗೆ ಜೀವಂತ ಹಾಗೂ ಸತ್ತವರೂ ಸೇರಿದಂತೆ ನಮ್ಮ ಎಲ್ಲ ಒತ್ತೆಯಾಳುಗಳ ಬಿಡುಗಡೆ ಘೋಷಿಸಲು ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇನೆ. ಈ ವೇಳೆ ಐಡಿಎಫ್ (ಇಸ್ರೇಲ್ ಡಿಫೆನ್ಸ್ ಫೋರ್ಸ್) ಗಾಜಾದಲ್ಲಿ ಕಾರ್ಯಾಚರಣೆ ಮುಂದುವರಿಸುತ್ತದೆ,” ಎಂದು ನೆತನ್ಯಾಹು ಹೇಳಿದರು.
ಹಮಾಸ್ ಸಂಪೂರ್ಣ ನಿಶಸ್ತ್ರೀಕರಣ ಮಾಡುವುದಾಗಿ ಪ್ರತಿಜ್ಞೆ ಮಾಡಿದ ಅವರು, ಗಾಜಾದಿಂದ ಸಂಪೂರ್ಣ ಸೇನಾ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.