ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡ ಘೋಷಣೆ – ಶುಭಮನ್ ಗಿಲ್ ನಾಯಕತ್ವ

ದೆಹಲಿ: ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಬಿಸಿಸಿಐ ತಂಡವನ್ನು ಪ್ರಕಟಿಸಿದ್ದು, ಮಹತ್ವದ ಬದಲಾವಣೆಗಳನ್ನು ಕಂಡಿದೆ. ಟೀಮ್ ಇಂಡಿಯಾದ ಏಕದಿನ ಕ್ರಿಕೆಟ್ ತಂಡಕ್ಕೆ ಶುಭಮನ್ ಗಿಲ್ ಅವರನ್ನು ಹೊಸ ನಾಯಕನನ್ನಾಗಿ ನೇಮಿಸಲಾಗಿದೆ. ಇದರಿಂದ ರೋಹಿತ್ ಶರ್ಮಾ ಅವರ ನಾಯಕತ್ವದ ಅಧ್ಯಾಯಕ್ಕೆ ತೆರೆಬಿದ್ದಂತಾಗಿದೆ. ಗಿಲ್ ಅವರ ಉಪನಾಯಕರಾಗಿ ಶ್ರೇಯಸ್ ಅಯ್ಯರ್ ಸೇವೆ ಸಲ್ಲಿಸಲಿದ್ದಾರೆ.

ಅಕ್ಟೋಬರ್ 19ರಿಂದ ಪ್ರಾರಂಭವಾಗುವ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ರಾಷ್ಟ್ರೀಯ ತಂಡಕ್ಕೆ ಮರುಪ್ರವೇಶ ಮಾಡಲಿದ್ದಾರೆ. ಇವರು ಈಗಾಗಲೇ ಟೆಸ್ಟ್ ಮತ್ತು ಟಿ20ಐಗಳಿಂದ ನಿವೃತ್ತರಾಗಿದ್ದು, ಮುಂದಿನ ದಿನಗಳಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಮುಖ್ಯ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಯುವ ಓಪನರ್ ಯಶಸ್ವಿ ಜೈಸ್ವಾಲ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ.

ಟಿ20ಐ ನಾಯಕತ್ವ
ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಟಿ20ಐ ಸರಣಿಗೆ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಗಿಲ್ ಅವರು ಉಪನಾಯಕರಾಗಲಿದ್ದಾರೆ. ಗಾಯದಿಂದ ಬಳಲುತ್ತಿರುವ ಹಾರ್ದಿಕ್ ಪಾಂಡ್ಯ ಅವರನ್ನು ತಂಡದಿಂದ ಕೈಬಿಡಲಾಗಿದ್ದು, ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಅವಕಾಶ ನೀಡಲಾಗಿದೆ.

ರೋಹಿತ್ ಭವಿಷ್ಯದ ಪ್ರಶ್ನೆ
ಗಿಲ್ ಅವರನ್ನು ಏಕದಿನ ತಂಡದ ನಾಯಕನನ್ನಾಗಿ ನೇಮಿಸುವ ಮೂಲಕ, ರೋಹಿತ್ ಶರ್ಮಾ ಮುಂದೆ ಯಾವುದೇ ನಾಯಕತ್ವದಲ್ಲಿ ಇರಲಾರರು ಎಂಬುದು ಸ್ಪಷ್ಟವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ರೋಹಿತ್ ಮತ್ತು ವಿರಾಟ್ ಅವರ ಭವಿಷ್ಯ ಈಗ ಸಂಪೂರ್ಣವಾಗಿ ಅವರ ವೈಯಕ್ತಿಕ ಫಾರ್ಮ್ ಮತ್ತು ಆಯ್ಕೆ ಸಮಿತಿಯ ತೀರ್ಮಾನಗಳ ಮೇಲೆ ಅವಲಂಬಿತವಾಗಿದೆ. 2027ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ರೋಹಿತ್ ಅವರ ಸ್ಥಾನ ಏನೆಂಬ ಕುತೂಹಲ ಮುಂದುವರೆದಿದೆ.
ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರು ರೋಹಿತ್‌ ಶರ್ಮಾ ಅವರ ದೀರ್ಘಕಾಲೀನ ಭವಿಷ್ಯದ ಕುರಿತು ಯಾವುದೇ ಸ್ಪಷ್ಟ ಅಭಿಪ್ರಾಯ ನೀಡಿಲ್ಲ. ಆದರೆ ತಂಡದಲ್ಲಿ ನಾಯಕತ್ವದ ಬದಲಾವಣೆ ನಡೆದಿರುವುದು ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ ಎಂಬುದರಲ್ಲಿ ಸಂಶಯವಿಲ್ಲ.

error: Content is protected !!